ಭ್ರಷ್ಟಾಚಾರ, ಲಂಚಗುಳಿತನ ಪತ್ತೆಗಾಗಿ ಗಡಿಪ್ರದೇಶಗಳ ತಪಾಸಣಾ ಕೇಂದ್ರಗಳಲ್ಲಿ ವಿಜಿಲೆನ್ಸ್ ಕಣ್ಗಾವಲು
ಕಾಸರಗೋಡು: ರಾಜ್ಯದ ಗಡಿ ಪ್ರದೇಶಗಳ ತಪಾಸಣಾ ಕೇಂದ್ರಗಳಲ್ಲಿ ಲಂಚಗುಳಿತನ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಂತಹ ಎಲ್ಲಾ ತಪಾಸಣಾ ಕೇಂದ್ರಗಳಲ್ಲಿ ರಾಜ್ಯ ಜಾಗ್ರತಾದಳ (ವಿಜಿಲೆನ್ಸ್) ಕಣ್ಗಾವಲು ಏರ್ಪಡಿಸಿದೆ.
ಇದರಂತೆ ಕೇರಳ-ಕರ್ನಾಟಕ ಮತ್ತು ಕೇರಳ-ತಮಿಳುನಾಡು ಗಡಿ ಪ್ರದೇಶಗಳಲ್ಲಿರುವ ಎಲ್ಲಾ ತಪಾಸಣಾ ಕೇಂದ್ರಗಳಲ್ಲಿ ವಿಜಿಲೆನ್ಸ್ ತೀವ್ರ ನಿಗಾ ಇರಿಸತೊಡಗಿದೆ.
ಇಂತಹ ತಪಾಸಣಾ ಕೇಂದ್ರಗಳಿಗೆ ವಿಜಿಲೆನ್ಸ್ ದಿಢೀರ್ ಆಗಿ ಮಿಂಚಿನ ದಾಳಿ ಮತ್ತು ತಪಾಸಣೆ ಆರಂಭಿಸಿದೆ. ಶಬರಿಮಲೆ ತೀರ್ಥಾಟಕರಿಂದಲೂ ಕೆಲವು ತಪಾಸಣಾ ಕೇಂದ್ರಗಳಲ್ಲಿ ಲಂಚ ಸ್ವೀಕರಿಸಲಾಗಿದೆ ಎಂಬ ಮಾಹಿತಿಯೂ ವಿಜಿಲೆನ್ಸ್ಗೆ ಲಭಿಸಿದೆ.
ಗಡಿದಾಟಿ ಕೇರಳಕ್ಕೆ ಪ್ರವೇಶಿಸುತ್ತಿರುವ ಸರಕು ಹೇರಿದ ವಾಹನಗಳನ್ನೆಲ್ಲವನ್ನು ತಪಾಸಣಾ ಕೇಂದ್ರಗಳಲ್ಲಿ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಕೇರಳದೊಳಗೆ ಪ್ರವೇಶಿಸಲು ಬಿಡಲಾಗುತ್ತಿದೆ. ಇಂತಹ ತಪಾಸಣೆ ವೇಳೆ ರಾಜ್ಯದ ಕೆಲವು ತಪಾಸಣಾ ಕೇಂದ್ರದ ಸಿಬ್ಬಂದಿಗಳು ಲಂಚ ಸ್ವೀಕರಿಸುತ್ತಿರುವ ಬಗ್ಗೆ ವಿಜಿಲೆನ್ಸ್ ವಿಭಾಗಕ್ಕೆ ವ್ಯಾಪಕ ದೂರುಗಳು ಬರತೊಡಗಿದ್ದು, ಅದುವೇ ತಪಾಸಣಾ ಕೇಂದ್ರಗಳಲ್ಲಿ ವಿಜಿಲೆನ್ಸ್ ತಂಡ ತನ್ನ ನೋಟ ತೀವ್ರಗೊಳಿಸಿರುವುದರ ಪ್ರಧಾನ ಹಿನ್ನೆಲೆಯಾಗಿದೆ.