ಮಂಗಲ್ಪಾಡಿಯಲ್ಲಿ 10 ಸರಕಾರಿ ಕಟ್ಟಡಗಳು ಅನಾಥ
ಮಂಗಲ್ಪಾಡಿ: ಪಂಚಾಯತ್‌ನ ಶಿಕ್ಷಣ ಇಲಾಖೆಯ 10 ಕಟ್ಟಡಗಳು ಅನಾಥವಾಗಿ ಬಿದ್ದುಕೊಂಡಿವೆ. ೮ ಕಟ್ಟಡಗಳು ಹಳೆಯ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್, 2 ಕಟ್ಟಡಗಳು ಚಿನ್ನಮೊಗರು ಶಿರಿಯ ಏಕೋಪಾ ಧ್ಯಾಯ ವಿದ್ಯಾಲಯಗಳಾಗಿವೆ. ಇಲ್ಲಿ ಈಗ ಜಿಬಿಎಲ್‌ಪಿ ಶಾಲೆ ಮಂಗಲ್ಪಾಡಿ ಮಾತ್ರವೇ ಕಾರ್ಯಾಚರಿಸುತ್ತಿದೆ. ಈ ಕಟ್ಟಡಕ್ಕೆ 100 ವರ್ಷಕ್ಕೂ ಹೆಚ್ಚು ಹಳಮೆ ಇದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿಯ ಅಂಗವಾಗಿರುವ ಹೈಸ್ಕೂಲ್, ಯುಪಿ ಶಾಲೆ, ಹೈಯರ್ ಸೆಕೆಂಡರಿ ನೆಲೆಗೊಂಡಿರುವ ಜನಪ್ರಿಯ ಜಂಕ್ಷನ್‌ಗೆ ಸ್ಥಳಾಂತರಗೊಂಡ ಕಾರಣ ೮ ಕಟ್ಟಡಗಳು ಖಾಲಿಯಾಗಿವೆ. ಏಕೋ ಪಾಧ್ಯಾಯ ವಿದ್ಯಾಲಯಗಳು ಸರಕಾರ ನಿಲ್ಲಿಸಿದ ಕಾರಣ ಅಲ್ಲಿನ ಅಧ್ಯಾಪಕರನ್ನು ಇತರೆಡೆಗೆ ವರ್ಗಾಯಿಸಿದ್ದು, ಆ ಕಟ್ಟಡ ಗಳು ಈಗ ಜನರಿಲ್ಲದೆ ಖಾಲಿಯಾಗಿದೆ.
ಶಾಲೆಯನ್ನು ಇಲ್ಲಿಂದ ಸ್ಥಳಾಂತರಗೊಳಿಸಿದ ಕಾರಣ ಕುಕ್ಕಾರು, ಚೆರುಗೋಳಿ, ಪೆರಿಂಗಡಿ, ಬೇರಿಕೆ, ಕಡಪ್ಪುರಂ, ಮಳ್ಳಂಗೈ, ಬಂದ್ಯೋಡು, ಅಡ್ಕ, ಬೈದಲ ಪ್ರದೇಶಗಳ ಯುಪಿ ಶಾಲಾ ವಿದ್ಯಾರ್ಥಿಗಳು ಅತ್ಯಂತ ಸಂಕಷ್ಟಕ್ಕೀಡಾಗಿದ್ದಾರೆ. ಅವರು ಕಿಲೋ ಮೀಟರ್‌ಗಳಷ್ಟು ದೂರ ಸಂಚರಿಸಿ ಶಿರಿಯ ಹೈಯರ್ ಸೆಕೆಂಡರಿ ಶಾಲೆಗೆ ಅಥವಾ ಪಾರೆಕಟ್ಟೆ ಎಜೆಐಯುಪಿ ಶಾಲೆಗೆ ತೆರಳಬೇಕಾಗಿದೆ. ಜಿಬಿಎಲ್‌ಪಿ ಮಂಗಲ್ಪಾಡಿ ಶಾಲೆಯನ್ನು ಯುಪಿ ಶಾಲೆಯಾಗಿ ಭಡ್ತಿಗೊಳಿಸಿ ಹೈಯರ್ ಸೆಕೆಂಡರಿಗೆ ಸ್ಥಳಾಂತರಗೊಳಿಸಿದ ತರಗತಿಗಳನ್ನು ಇಲ್ಲಿಗೆ ಪುನರ್ ವಿನ್ಯಾಸಗೊಳಿಸಿದರೆ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯಕರವಾದೀತು ಎಂದು ಕಂಡು ಬರುತ್ತಿದೆ. ಹೊಸ ಮುಖ್ಯೋಪಾಧ್ಯಾಯರನ್ನು ನೇಮಕಗೊಳಿಸಬೇಕಾಗಿಲ್ಲ.
ಖಾಲಿ ಬಿದ್ದಿರುವ ಕಟ್ಟಡಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದರೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿ ರುವ ಹಲವಾರು ಸರಕಾರಿ ಕಚೇರಿಗಳನ್ನು ಇದಕ್ಕೆ ಸ್ಥಳಾಂತರಿಸಲು ಸಾಧ್ಯವಿದೆ ಎಂದು ಕಂಡು ಬರುತ್ತಿದೆ. ಈ ಹಿನ್ನೆಲೆ ಯಲ್ಲಿ ಈ ತಿಂಗಳ ೧೦ರಂದು ಸರ್ವ ಪಕ್ಷದ ಮುಖಂಡರ, ಜನಪ್ರತಿನಿಧಿಗಳ, ಶಿಕ್ಷಣ ಕಾರ್ಯಕರ್ತರನ್ನು ಆಹ್ವಾನಿಸಿ ಈ ಬಗ್ಗೆ ಚರ್ಚೆ ನಡೆಸಲಾಗುವುದೆಂದು ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ, ಮಂಗಲ್ಪಾಡಿ ಜನಪರ ವೇದಿ ತಿಳಿಸಿದೆ.