ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ : ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಜ.೧ರಿಂದ
ಕಾಸರಗೋಡು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ದಾಖಲಿಸಲಾಗಿರುವ ಲಂಚ ಸ್ವೀಕಾರ ಆರೋಪ ಪ್ರಕರಣವನ್ನು ರದ್ದುಪಡಿಸಬೇಕೆಂದು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತಿತರರು ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಜನವರಿ ೧ರಿಂದ ಆರಂಭಗೊಳ್ಳಲಿದೆ.
ಈ ಪ್ರಕರಣದ ವಿಚಾರಣೆ ನಿನ್ನೆ ಆರಂಭಗೊಳ್ಳಬೇಕಾಗಿತ್ತು. ಆದರೆ ನ್ಯಾಯಾಧೀಶರು ನಿನ್ನೆ ರಜೆಯಾಗಿದ್ದ ಕಾರಣದಿಂದ ವಿಚಾರಣೆಯನ್ನು ಬಳಿಕ ಜನವರಿ ೧ಕ್ಕೆ ಮುಂದೂಡಲಾಯಿತು.
ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಬಿಎಸ್ಪಿ ಉಮೇದ್ವಾರರಾಗಿ ಸ್ಪರ್ಧೆ ಗಿಳಿದಿದ್ದ ಕೆ. ಸುಂದರರಿಗೆ ಎರಡೂವರೆ ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಿ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ ಮಂಜೇಶ್ವರ ಪೊಲೀಸರು ಕೆ. ಸುರೇಂದ್ರನ್ ಸೇರಿದಂತೆ ಬಿಜೆಪಿಯ ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದ ತನಿಖೆಯನ್ನು ಬಳಿಕ ಕ್ರೈಮ್ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಅದರಂತೆ ಕ್ರೈಮ್ ಬ್ರಾಂಚ್ ವಿಭಾಗ ಆ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯದ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣ ಕಾನೂನು ಪ್ರಕಾರ ನೆಲೆಗೊಳ್ಳದೆಂದೂ ಆದ್ದರಿಂದ ಅದನ್ನು ರದ್ದುಪಡಿಸಬೇಕೆಂದು ಕೋರಿ ಬಳಿಕ ಕೆ. ಸುರೇಂದ್ರನ್ ಸೇರಿದಂತೆ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪರಿಶೀಲಿಸಿದ ದಿನದಂದು ಅರ್ಜಿ ಸಲ್ಲಿಸಿದವರು ಅಂದು ನ್ಯಾಯಾಲ ಯದಲ್ಲಿ ಹಾಜರಾಗಿರಲಿಲ್ಲ. ಬಳಿಕ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಅಕ್ಟೋಬರ್ ೨೫ರಂದು ಎಲ್ಲಾ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು.