ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ವಿಚಾರಣೆ ಮಾ. ೭ಕ್ಕೆ ಮುಂದೂಡಿಕೆ
ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿ.ಎಸ್.ಪಿ ಉಮೇದ್ವಾರ ಸುಂದರರಿಗೆ ಲಂಚ ನೀಡಿ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಿಸಲಾದ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಪ್ರತಿವಾದಿಗಳಾದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರ ೫ ಮಂದಿ ಸಲ್ಲಿಸಿದ ಅರ್ಜಿಯ ಪರಿಶೀಲನೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಯ್ ನ್ಯಾಯಾಲಯ ಮತ್ತೆ ಮುಂದೂಡಿದೆ. ಇದರಂತೆ ಮಾರ್ಚ್ ೭ಕ್ಕೆ ಅರ್ಜಿಯನ್ನು ನ್ಯಾಯಾಲಯ ಪರಿಶೀಲಿಸಲಿದೆ.
ಬಿ.ಎಸ್.ಪಿ ಉಮೇದ್ವಾರ ಸುಂದರರ ನಾಮಪತ್ರ ಹಿಂತೆದುಕೊಳ್ಳುವಂತೆ ಮಾಡಲು ಅವರಿಗೆ ಎರಡೂವರೆ ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಲಾಗಿತ್ತೆಂದು ಆರೋಪಿಸಿ ಅಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದ ಉಮೇದ್ವಾರರಾಗಿ ಸ್ಪರ್ಧಿಸಿದ್ದ ವಿ.ವಿ. ರಮೇಶನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ೨೦೨೧ ಜೂನ್‌ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಲ್ಲಿ ಬಿಜೆಪಿಯ ಕೆ. ಸುರೇಂದ್ರನ್ ಸೇರಿದಂತೆ ಒಟ್ಟು ಐದು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ನಂತರ ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲವೆಂದೂ, ಈ ಪ್ರಕರಣದಲ್ಲಿ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರಿತವಾದುದ್ದಾಗಿದೆ. ಆದ್ದರಿಂದ ಪ್ರಸ್ತುತ ಪ್ರಕರಣವನ್ನು ರದ್ದುಪಡಿಸ ಬೇಕೆಂದು ಕೋರಿ ಪ್ರತಿವಾದಿಗಳಾದ ಕೆ. ಸುರೇಂದ್ರನ್ ಸೇರಿದಂತೆ ಐದು ಮಂದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ನ್ಯಾಯಾಲಯ ಇದೀಗ ಮತ್ತೆ ಮುಂದೂಡಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸ ಲಾಗಿದ್ದ ಎಲ್ಲಾ ಐದು ಮಂದಿಗೆ ಕಳೆದ ಅಕ್ಟೋಬರ್ ೨೫ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.