ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ತೀರ್ಪು 30ಕ್ಕೆ
ಕಾಸರಗೋಡು: ಮಂಜೇಶ್ವರ ಚುನಾವಣಾ ತಕರಾರು ಪ್ರಕರಣದ ವಾದ-ಪ್ರತಿವಾದ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾ ಲಯದಲ್ಲಿ ಪೂರ್ಣಗೊಂಡಿದೆ. ಇದರ ತೀರ್ಪನ್ನು ನ್ಯಾಯಾಲಯ ಸೆಪ್ಟಂಬರ್ 30ಕ್ಕೆ ನಿಗದಿಪಡಿಸಿದೆ.
ಮಂಜೇಶ್ವರ ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ 2.5 ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಿ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆಯೆಂದು ಆರೋಪಿಸಿ ಅದು ಈ ಕ್ಷೇತ್ರದಲ್ಲಿ ಎಡರಂಗದ ಉಮೇದ್ವಾರನಾಗಿ ಸ್ಪರ್ಧಿಸಿದ್ದ ವಿ.ವಿ. ರಮೇಶನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಅಂದು ಇದೇ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಉಮೇದ್ವಾರರಾಗಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್, ಬಿಜೆಪಿ ನೇತಾರರಾದ ಬಾಲಕೃಷ್ಣ ಶೆಟ್ಟಿ, ಸುನಿಲ್ ನಾಯ್ಕ್, ಕೆ. ಮಣಿಕಂಠ ರೈ, ವೈ. ಸುರೇಶ್ ಮತ್ತು ಲೋಕೇಶ್ ನೋಂಡಾ ಸೇರಿದಂತೆ ಆರು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಂಡಿದ್ದರ. ನಂತರ ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗಿತ್ತು. ಕ್ರೈಂ ಬ್ರಾಂಚ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ವಾಸ್ತವ ರಹಿತವಾದು ದೆಂದೂ, ಕಾನೂನು ಪ್ರಕಾರ ಅದು ನೆಲೆಗೊಳ್ಳದೆಂದೂ ಆದ್ದರಿಂದ ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಕೆ. ಸುರೇಂದ್ರನ್ ಸೇರಿದಂತೆ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಾದ-ಪ್ರತಿವಾದ ಪ್ರಕ್ರಿಯೆಗಳು ಪೂರ್ಣ ಗೊಂಡಿದ್ದು, ತೀರ್ಪನ್ನು ನ್ಯಾಯಾಲಯ ಸೆ. 30ಕ್ಕೆ ಮೀಸಲಿರಿಸಿದೆ.