ಮಂಜೇಶ್ವರ ತಾಲೂಕಿನಲ್ಲಿ ವ್ಯಾಪಕಗೊಳ್ಳುತ್ತಿರುವ ಕಳವು : ತನಿಖೆ ತೀವ್ರಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ, ಡಿಜಿಪಿಗೆ ಶಾಸಕರ ಮನವಿ

ಮಂಜೇಶ್ವರ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಡಹಗಲೇ ಕಳವು ನಡೆಯುತ್ತಿರುವುದು ಕಳ್ಳರಿಗೆ ಹೆದರಿ ಮನೆ ಬಿಟ್ಟು ಹೋಗಲಾಗದ ಸ್ಥಿತಿಯಲ್ಲಿ ಜನರಿದ್ದಾರೆಂದು ಶಾಸಕ ಎ.ಕೆ.ಎಂ. ಅಶ್ರಫ್ ಅಭಿಪ್ರಾಯಪಟ್ಟಿದ್ದಾರೆ. ಕಳ್ಳರ ಹಾವಳಿಯನ್ನು ನಿಯಂತ್ರಿಸಲು ಪ್ರತ್ಯೇಕ ಪೊಲೀಸ್ ಸ್ಕ್ವಾಡನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ಮನವಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮುಂದುವರಿಯುತ್ತಿರುವ ಸರಣಿ ಕಳವುಗಳಲ್ಲಿ ಆರೋಪಿಗಳ ಪತ್ತೆ, ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದು ಈಗ ಹಗಲು ಹೊತ್ತಿನಲ್ಲೇ ಕಳವು ನಡೆಸಲು ಕಳ್ಳರಿಗೆ ಪ್ರೇರಣೆ ನೀಡಿದಂತಾಗಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ. ಕುಂಬಳೆ, ಮಂಜೇಶ್ವರದಲ್ಲಿ ಎರಡು ಪೊಲೀಸ್ ಠಾಣೆಗಳಿದ್ದು, ಮಂಜೇಶ್ವರ ವಲಯ ವಿಶಾಲ ಪ್ರದೇಶವಾದ ಕಾರಣ ಈ ಸ್ಥಳಗಳಿಗೆಲ್ಲಾ ತಲುಪಲು ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಅಗತ್ಯ ವಾಹನಗಳು, ಮೂಲ ಸೌಕರ್ಯಗಳಿಲ್ಲದೆ ಜನರಿಗೆ ಸೂಕ್ತ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೈವಳಿಕೆಯಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪಿಸಬೇಕೆಂಬ ಬೇಡಿಕೆಗೆ ಬಲ ಹೆಚ್ಚಿದೆ ಎಂದು ಶಾಸಕರು ತಿಳಿಸಿದ್ದಾರೆ.

ಉಪ್ಪಳದ ಪೊಲೀಸ್ ಎಯ್ಡ್ ಪೋಸ್ಟ್‌ನ ೫೦ ಮೀಟರ್ ದೂರದಲ್ಲಿ ಎಟಿಎಂಗೆ ಹಣ ಹಾಕಲೆಂದು ಬಂದ ವಾಹನವನ್ನು ಹಾನಿಗೊಳಿಸಿ ೫೦ ಲಕ್ಷ ಕಳವು ನಡೆಸಿರುವುದು ಹಾಡಹಗಲಾಗಿದೆ. ಚಿನ್ನಕ್ಕೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಕಳವು ಕೂಡಾ ವ್ಯಾಪಕವಾಗುತ್ತಿದೆ. ಇತ್ತೀಚೆಗೆ ಉಪ್ಪಳ ಸೋಂಕಾಲ್‌ನಲ್ಲಿ ಕಳವು ನಡೆದಿದೆ. ಮಂಗಲ್ಪಾಡಿ ಪಂಚಾಯತ್ ಕಚೇರಿಯಲ್ಲೂ ಕಳವು ಯತ್ನ ನಡೆದಿದ್ದು, ಉಪ್ಪಳ ಗೇಟ್, ಮೀಯಪದವು, ಆರಿಕ್ಕಾಡಿ, ಕೊಡ್ಯಮ್ಮೆ, ಮಂಜೇಶ್ವರ ರಾಗಂ ಜಂಕ್ಷನ್, ಉರ್ಮಿ ಮೊದಲಾದ ಪ್ರದೇಶಗಳ ಸಹಿತ ವಿವಿಧ ಕಡೆಗಳಲ್ಲಿ ಕಳವು ನಡೆಸಲಾಗಿದೆ. ಈ ಬಗ್ಗೆ ಠಾಣೆಗೆ ಹೋಗಿ ದೂರು ನೀಡಿದರೆ ಪ್ರಥಮ ಹಂತದಲ್ಲಿ ತನಿಖೆ ನಡೆಯುತ್ತಿಲ್ಲವೆಂದು ವ್ಯಾಪಕ ದೂರು ಇದೆ. ಇದು ಕಳವು ಹೆಚ್ಚಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೈವಳಿಕೆಯಲ್ಲಿ ಪೊಲೀಸ್ ಠಾಣೆಯನ್ನು ಸ್ಥಾಪಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಶಾಸಕರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page