ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ಮಹಿಳಾ ಸದಸ್ಯೆ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ
ಮಂಜೇಶ್ವರ: ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿಯ ಮುಸ್ಲಿಂ ಲೀಗ್ ಸದಸ್ಯೆ ಆಯಿಷತ್ ರುಬೀನ ಪಂಚಾಯತ್ ಆಡಳಿತ ಸಮಿತಿ ಸಭೆ ಮಧ್ಯೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತನ್ನ ವಾರ್ಡ್‌ನಲ್ಲಿ ತೋರುತ್ತಿರುವ ಅವಗಣನೆಯನ್ನು ಪ್ರತಿಭಟಿಸಿ ಆತ್ಮಹತ್ಯಾ ಯತ್ನ ನಡೆಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್ ಉಪಾಧ್ಯಕ್ಷ ರಫೀಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಸಿಪಿಐ ಸದಸ್ಯೆ ರೇಖಾ ಎಂಬಿವರು ಸೇರಿ ರುಬೀನರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡುಹೋಗಲಾಗಿದೆ.
25 ವರ್ಷದಷ್ಟು ಹಳೆಯದಾದ 2 ಅಂಗನವಾಡಿಗಳು ಶೋಚನೀಯ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸ್ವಂತ ಕಟ್ಟಡಕ್ಕೆ ಬದಲಿಸಬೇಕೆಂದು ಸರಕಾರ ನಿರ್ದೇಶ ನೀಡಿತ್ತು. ಆದರೆ ಕಟ್ಟಡ ನಿರ್ಮಿಸಲು ಪಂಚಾಯತ್ ಯತ್ನಿಸಿಲ್ಲ. ಬದಲಾಗಿ ಬಾಡಿಗೆರಹಿತ ವಾಗಿ ಲಭಿಸಿದ ಎರಡು ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈಗ ಆ ಕಟ್ಟಡವು ಶೋಚನೀಯಾವಸ್ಥೆಯಲ್ಲಿದೆ. ಆಡಳಿತ ಸಮಿತಿ ಸಭೆ ಆರಂಭಗೊಂಡ ಕೂಡಲೇ ತನ್ನ ವಾರ್ಡ್‌ನ ಅಂಗನವಾಡಿಗಳ ವಿಷಯ ಏನಾಯಿತು ಎಂದು ರುಬೀನ ಪ್ರಶ್ನಿಸಿದರು. ಮುಂದಿನ ಸಭೆಯಲ್ಲಿ ಆ ವಿಷಯದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ಉತ್ತರ ನೀಡಿ ರುವುದರೊಂದಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ ಬಳಿಕ ಸಭೆ ನಡೆಸಿದರೆ ಸಾಕೆಂದು ತನ್ನನ್ನು ಕೂಡಾ ಜನರೇ ಆಯ್ಕೆ ಮಾಡಿರುವುದೆಂದು ರುಬೀನ ನುಡಿದರು. ಸರಕಾರ ನಿರ್ದೇಶಿಸಿದ ಅಂಗನವಾಡಿ ಕಟ್ಟಡಗಳನ್ನು ಕೂಡಾ ನಿರ್ಮಿಸದ ಪಂಚಾಯತ್ ಆಡಳಿತ ಸಮಿತಿಯೊಂದಿಗೆ ಹೊಂದಿಕೊಂಡು ಸಾಗಲು ಸಾಧ್ಯವಿಲ್ಲವೆಂದು ಸಭೆಯಲ್ಲಿ ಅವರು ತಿಳಿಸಿದರು. ಬಳಿಕ ತನ್ನಲ್ಲಿದ್ದ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆತ್ನಿಸಿದರು. ಪ್ರಜ್ಞಾಹೀನಳಾಗಿ ಬಿದ್ದ ರುಬೀನಾರನ್ನು ಆಡಳಿತ ಸಮಿತಿ ಸದಸ್ಯರಾದ ರಫೀಕ್, ಯಾದವ್ ಬಡಾಜೆ, ರೇಖಾ ಎಂಬಿವರು ಮಂಗಲ್ಪಾಡಿಗೂ, ನಂತರ ದೇರಳಕಟ್ಟೆಗೂ ತಲುಪಿಸಿದ್ದಾರೆ. ರುಬೀನ ಚೇತರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಘಟನೆ ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಕಾಂಗ್ರೆಸ್, ಬಿಜೆಪಿ, ಲೀಗ್-ಎಸ್‌ಡಿಪಿಐ, ಎಡರಂಗದ ಸಹಕಾರದೊಂದಿಗೆ ಪಂಚಾಯತ್ ಆಡಳಿತ ನಡೆಸುತ್ತಿದೆ.