ಮಂಜೇಶ್ವರ ಪಂಚಾಯತ್ ಕಚೇರಿಯೊಳಗೆ ಹಾವು ಪ್ರತ್ಯಕ್ಷ: ಬೆಚ್ಚಿ ಬಿದ್ದ ಸಿಬ್ಬಂದಿಗಳು
ಮಂಜೇಶ್ವರ: ಮಂಜೇಶ್ವರ ಪಂಚಾಯತ್‌ನಲ್ಲಿ ಹಾವೊಂದು ಕಾಣಿಸಿಕೊಂಡು ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ನಡೆದಿದೆ. ಪಂಚಾಯತ್ ಕಚೇರಿ ನಿನ್ನೆ ಬೆಳಿಗ್ಗೆ ಎಂದಿನಂತೆ ತೆರೆದು ಸಿಬ್ಬಂದಿಗಳು ಒಳ ಪ್ರವೇಶಿಸಿದಾಗ ಕಚೇರಿಯೊಳಗೆ ಹಾವು ಪತ್ತೆಯಾಗಿದೆ. ಅದನ್ನು ಕಂಡು ಒಮ್ಮೆಲೇ ಬೆಚ್ಚಿ ಬಿದ್ದ ಸಿಬ್ಬಂದಿಗಳು ಆ ಕೂಡಲೇ ಫೋನಾಯಿಸಿ ಕಾಸರಗೋಡಿನಿಂದ ಹಾವು ಹಿಡಿಯುವವರನ್ನು ಕರೆಸಿ ಅವರ ಸಹಾಯದಿಂದ ಹಾವನ್ನು ಸೆರೆ ಹಿಡಿದು ಹೊರಹಾಕಲಾಯಿತು. ಆ ಬಳಿಕವ್ಟೇ ಸಿಬ್ಬಂದಿಗಳು ನೆಮ್ಮದಿಯ ಉಸಿರು ಬಿಟ್ಟರು.
ಈ ಪಂಚಾಯತ್ ಕಚೇರಿಯ ಸುತ್ತುಮುತ್ತ ಪೊದೆಗಳಿಂದ ಆವರಿಸಿಕೊಂಡಿದೆ. ಇದರಿಂದಾಗಿ ಪಂಚಾಯತ್ ಕಚೇರಿಯ ಬಾಗಿಲು, ಕಿಟಕಿ ಮತ್ತಿತರ ಸೆರೆಗಳಿಂದ ವನ್ಯ ಜೀವಿಗಳು ಒಳನುಗ್ಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಪಂಚಾಯತ್ ಕಚೇರಿಗೆ ಸುದೃಢವಾದ ರೀತಿಯ ಬಾಗಿಲು ಮತ್ತು ಕಿಟಕಿ ಬಾಗಿಲುಗಳನ್ನು ಅಳವಡಿಸ ಬೇಕಾಗಿದೆ. ಮಾತ್ರವಲ್ಲ ಪಂಚಾಯತ್ ಕಚೇರಿಯ ಸುತ್ತುಮುತ್ತಲ ಪೊದೆಗಳನ್ನು ತೆರವುಗೊಳಿಸಿ ಶುಚೀಕರಿಸುವ ಕೆಲಸವೂ ನಡೆಯಬೇಕಾಗಿದೆ ಎಂದು ಆ ಪರಿಸರದವರೂ ಹೇಳುತ್ತಿದ್ದಾರೆ. ವಿವಿಧ ಅಗತ್ಯಗಳಿಗಾಗಿ ಜನರು ಬರುವ ಕಚೇರಿಯಾಗಿದೆ ಇದು. ಆದ್ದರಿಂದ ಅವರು ಮಾತ್ರವಲ್ಲ ಜೊತೆಗೆ ಸಿಬ್ಬಂದಿಗಳ ಸುರಕ್ಷತೆ ಯನ್ನೂ ಖಾತರಿಪಡಿಸಬೇಕೆಂದು ಅವರು ಹೇಳುತ್ತಿದ್ದಾರೆ.