ಮಂಜೇಶ್ವರ ಪರಿಸರ ಚಿತ್ರೀಕರಿಸಿದ ತುಳು ಸಿನಿಮಾ ‘ಪಿದಯಿ’ಗೆ ದ್ವಿತೀಯ ಪ್ರಶಸ್ತಿ
ಬೆಂಗಳೂರು: ಮಂಜೇಶ್ವರ ಹಾಗೂ ಸುತ್ತು ಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಿದ ತುಳು ಸಿನಿಮಾಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮೇಳದಲ್ಲಿ ದ್ವಿತೀಯ ಉತ್ತಮ ಚಿತ್ರವಾಗಿ ಬಹುಮಾನ ಗಳಿಸಿದೆ. ಫೆಸ್ಟಿವಲ್‌ನಲ್ಲಿ ಚಿತ್ರಭಾರತಿ, ಕರ್ನಾಟಕ ಸಿನಿಮಾ ಎಂಬ ಎರಡು ವಿಭಾಗಗಳಿಗಿರುವ ಸ್ಪರ್ಧೆಯಲ್ಲಿ ‘ಪಿದಯಿ’ ಆಯ್ಕೆಯಾಗಿದೆ. ಇದೇ ಪ್ರಥಮ ಬಾರಿಗೆ ತುಳು ಭಾಷಾ ಸಿನಿಮಾ ವೊಂದು ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವುದು. ನಮ್ಮ ಕನಸು ಬ್ಯಾನರ್‌ನಲ್ಲಿ ಕೆ. ಸುರೇಶ್ ನಿರ್ಮಿಸಿದ ಈ ಸಿನಿಮಾದ ಕಥೆ ಹಾಗೂ ಚಿತ್ರಕಥೆ, ಸಂಭಾಷಣೆಯನ್ನು ಮಂಜೇಶ್ವರ ನಿವಾಸಿ ರಮೇಶ್ ಶೆಟ್ಟಿಗಾರ್ ರಚಿಸಿದ್ದಾರೆ. ಜೀಟಿಗೆ ಎಂಬ ಮೊದಲ ತುಳು ಸಿನಿಮಾದ ಮೂಲಕ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಸಂತೋಷ್ ಮಾಡರ ಪಿದಯಿ ಎಂಬ ಈ ಸಿನಿಮಾ ಈಗಾಗಲೇ ಕೋಲ್ಕತ್ತಾ, ಝಾರ್ಖಂಡ್ ಅಂತಾರಾಷ್ಟ್ರೀಯ ಚಲನಚಿತ್ರ ಮೇಳಗಳಲ್ಲಿ ಪ್ರದರ್ಶಿಸಿ ಜನರ ಗಮನ ಸೆಳೆದಿದೆ. ಮಲೆಯಾಳಿ ನಿರ್ದೇಶಕ ರಾದ ಜಯರಾಜ್, ಕಮಲ್, ರೋಶನ್ ಆಂಡ್ರೋಸ್ ಎಂಬಿವರ ಸಹಾಯಕರಾಗಿ ಹಲವಾರು ಮಲೆಯಾಳ, ತಮಿಳು ಸಿನಿಮಾಗಳಲ್ಲಿ ಸಂತೋಷ್ ಮಾಡ ನಿರ್ದೇಶಕರಾಗಿ ಸಹಕರಿಸಿದ್ದರು. ಪಿದಯಿ ಚಿತ್ರದಲ್ಲಿ ಕನ್ನಡ ನಟ ಶರತ್ ಲೋಹಿತಾಶ್ವ ನಾಯಕನಾಗಿ ನಟಿಸಿದ್ದು, ಹಿರಿಯ ಮಲೆಯಾಳಿ ನಟಿ ಜಲಜರ ಪುತ್ರಿ ದೇವೀ ನಾಯರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪಾತ್ರ ವಹಿಸಿದ ಇತರರೆಂದರೆ ರೂಪ ವರ್ಕಾಡಿ, ಇಳ ವಿಟ್ಲ, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಬಾಲಪ್ರತಿಭೆಗಳಾಗಿ ಮೋನಿಶ್, ತೃಷಾರಾಗಿದ್ದಾರೆ. ಇವರೆಲ್ಲಾ ಕೇರಳ-ಕರ್ನಾಟಕ ಗಡಿ ಪ್ರದೇಶದ ನಿವಾಸಿಗಳಾಗಿದ್ದಾರೆ.ಉಣ್ಣಿ ಮಡವೂರು ಛಾಯಾಗ್ರಹಣ ನೀಡಿದ್ದು, ಖ್ಯಾತ ಕವಿ ಪದ್ಮಶ್ರೀ ಕೈತಪ್ರಂ ದಾಮೋದರನ್ ನಂಬೂದಿರಿ ಯವರ ಸಂಸ್ಕೃತ ಹಾಡಿಗೆ ಪಿ.ವಿ. ಅಜಯನ್ ನಂಬೂದಿರಿ ಸಂಗೀತ ನೀಡಿದ್ದಾರೆ. ಸುಧೀರ್ ಅತ್ತಾವರ, ಕುಶಾಲಾಕ್ಷಿ ವಿ. ಕುಲಾಲ್ ಎಂಬವರು ಹಾಡು ರಚಿಸಿದ್ದಾರೆ. ವಸ್ತ್ರಾಲಂಕಾರ ಮೀರಾ ಸಂತೋಷ್ ನಿರ್ವಹಿಸಿದ್ದಾರೆ. ಕೇರಳೀಯರಾದ ರಾಜೇಶ್ ಬಂದ್ಯೋಡು ಕಲಾ ನಿರ್ದೇಶನ, ಬಿನೋಯ್ ಕೊಲ್ಲಂ ಮೇಕಪ್ ನಿರ್ವಹಿಸಿದ್ದಾರೆ.