ಮಂಜೇಶ್ವರ ರಾಗಂ ಜಂಕ್ಷನ್ನಲ್ಲಿ ಕಾಲುದಾರಿ ನಿರ್ಮಾಣ ಸಂಬಂಧ ಅಧಿಕಾರಿಗಳ ಭೇಟಿ: ಮುಷ್ಕರ ಸಮಿತಿ ನಿರೀಕ್ಷೆಯಲ್ಲಿ
ಮಂಜೇಶ್ವರ: ಸ್ಥಳೀಯರೆಲ್ಲ ಒಟ್ಟು ಸೇರಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಫಲಪ್ರಾಪ್ತಿ ನಿರೀಕ್ಷೆ ಉಂಟಾಗಿದೆ. ಮಂಜೇಶ್ವರ ರಾಗಂ ಜಂಕ್ಷನ್ನಲ್ಲಿ ಸುರಕ್ಷಿತ ಕಾಲು ದಾರಿಗೆ ಆಗ್ರಹಿಸಿ ಸ್ಥಳೀಯರು ನಡೆಸುತ್ತಿರುವ ಮುಷ್ಕರ 167ನೇ ದಿನಕ್ಕೆ ತಲುಪಿದ್ದು, ಅಧಿಕಾರಿಗಳು ಸಕಾರಾತ್ಮಕ ನಿಲುವು ವ್ಯಕ್ತಪಡಿಸಿರುವುದು ಮುಷ್ಕರ ನಿರತರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಅಂಡರ್ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ನಿರ್ದೇಶನ ದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು, ನಿರ್ಮಾಣ ಕಂಪೆನಿಯಾದ ಯುಎಲ್ಸಿಸಿ ಪ್ರತಿನಿಧಿಗಳು ಶಾಸಕ ಎ.ಕೆ.ಎಂ. ಅಶ್ರಫ್, ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ರಾಗಂ ಜಂ ಕ್ಷನ್ನಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಆದರೆ ಅಂಡರ್ಪಾಸ್ ನಿರ್ಮಾಣಕ್ಕೆ ಕೇಂದ್ರ ಸಚಿವಾಲಯದ ಅನುಮತಿ ಅಗತ್ಯವಿದೆಯೆಂದು ಅಧಿಕಾರಿಗಳು ತಿಳಿಸಿದ್ದು, ಈ ಸಂಬಂಧ ದೆಹಲಿಗೆ ತೆರಳಿ ಸಚಿವರ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳ ಹೋರಾಟದ ಬೇಡಿಕೆ ಫಲವತ್ತಾಗುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.