ಮಕ್ಕಳ ಅಪಹರಣ ತಂಡ ತಲುಪಿದ ಬಗ್ಗೆ ವದಂತಿ: ಮಂಗಲ್ಪಾಡಿಯಲ್ಲಿ ಆತಂಕ
ಕುಂಬಳೆ: ಮಕ್ಕಳನ್ನು ಅಪಹರಿ ಸುವ ತಂಡ ಕಾರ್ಯಾಚರಿಸ ತೊಡಗಿದೆ ಎಂಬ ವದಂತಿಯಿಂದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದೆ.
ಮೊನ್ನೆ ಸಂಜೆ ಶಿರಿಯ ಕುನ್ನಿಲ್ನ ನಿವಾಸಿಯೂ ಗಲ್ಫ್ಉದ್ಯೋಗಿ ಯಾದ ಅಶ್ರಫ್ ಎಂಬವರ ಮನೆಯ ಗೇಟ್ ಸಮೀಪ ಕಪ್ಪು ಬಣ್ಣದ ಓಮ್ನಿ ವ್ಯಾನೊಂದು ತಲುಪಿತ್ತು. ಕಾರಿನಿಂದ ಹೊರಕ್ಕಿಳಿದ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ ವ್ಯಕ್ತಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕರ ಹರೆಯದ ಬಾಲಕಿಗೆ ಚಾಕ್ಲೇಟ್ ತೋರಿಸಿ ಹತ್ತಿರಕ್ಕೆ ಕರೆದಿದ್ದಾನೆ. ಇದರಿಂದ ಸಂಶಯಗೊಂಡ ಬಾಲಕಿ ನಿಂತು ನೋಡುತ್ತಿದ್ದಂತೆ ಏಳರ ಹರೆಯದ ಬಾಲಕ ಮನೆಯಿಂದ ಹೊರಗೆ ಬಂದಿದ್ದು, ಅಷ್ಟರಲ್ಲಿ ಅಪರಿಚಿತ ವ್ಯಕ್ತಿ ಕಾರಿಗೆ ಹತ್ತಿ ಪರಾರಿಯಾಗಿದ್ದಾನೆ. ಈ ವಿಷಯವನ್ನು ಮನೆಯವರು ನೆರೆಮನೆ ಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಓಮ್ನಿ ವ್ಯಾನ್ ವೇಗದಲ್ಲಿ ಸಂಚರಿಸುವ ದೃಶ್ಯ ಕಂಡುಬಂದಿದೆಯೆನ್ನಲಾಗಿದೆ. ಈ ಘಟನೆ ಬಗ್ಗೆ ಹದಿನಾಲ್ಕನೇ ವಾರ್ಡ್ ಸದಸ್ಯೆ ಬೀಫಾತ್ತಿಮ ಅಬೂಬಕರ್ ಪೊಲೀಸರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಮನೆಯವರು ದೂರು ನೀಡಿದರೆ ಕೇಸು ದಾಖಲಿಸಿ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆನ್ನಲಾಗಿದೆ. ಆದರೆ ಮನೆಯವರು ದೂರು ನೀಡಲು ಮುಂದಾಗಿಲ್ಲ. ಇದೇ ವೇಳೆ ಘಟನೆ ನಾಡಿನಲ್ಲಿ ಆತಂಕಕ್ಕೂ ಕಾರಣ ವಾಗಿದೆ.