ಮಜೀರ್ಪಳ್ಳ ನಿವಾಸಿಯ ನಿಗೂಢ ಸಾವು: ಮೃತದೇಹದ ಸ್ಯಾಂಪಲ್ ರಾಸಾಯನಿಕ ತಪಾಸಣೆಗೆ
ಉಪ್ಪಳ: ಯುವಕನ ಸಾವಿನಲ್ಲಿ ನಿಗೂಢತೆಗಳಿವೆಯೆಂಬ ಆರೋಪದಂತೆ ದಫನಗೈದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹದ ಸ್ಯಾಂಪಲ್‌ನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ.
ಮಜೀರ್ಪಳ್ಳ ಬದಿಯಾರು ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ (44)ರ ಮೃತದೇಹದ ಸ್ಯಾಂಪಲ್ ರಾಸಾಯನಿಕ ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಅಶ್ರಫ್ ಈ ತಿಂಗಳ ೬ರಂದು ಮನೆಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮೃತದೇಹವನ್ನು ಕನ್ಯಾನದ ರಹ್ಮಾನಿಯ ಜುಮಾ ಮಸೀದಿ ಬಳಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಆದರೆ ಅಶ್ರಫ್‌ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಆರೋಪಿಸಿ ಅವರ ಸಹೋದರ ಕನ್ಯಾನ ಮರಾಟಿ ಮೂಲೆಯ ಇಬ್ರಾಹಿಂ ಜಿಲ್ಲಾ ಪೊಲೀಸಧಿಕಾರಿಗೆ ದೂರು ನೀಡಿದ್ದರು. ಇದರಂತೆ ಮೃತದೇಹ ವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಆರ್‌ಡಿಒ ಅನುಮತಿ ನೀಡಿದ್ದರು. ಅದರಂತೆ ನಿನ್ನೆ ಕನ್ಯಾನದ ಮಸೀದಿ ಬಳಿ ದಫನಗೈದ ಮೃತದೇಹ ವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಂಜೇಶ್ವರ, ವಿಟ್ಲ ಪೊಲೀಸರು, ಬಂಟ್ವಾಳ, ಮಂಜೇಶ್ವರ ತಾಲೂಕು ತಹಶೀಲ್ದಾರರು ಮೊದಲಾ ದವರು ಈ ವೇಳೆ ಉಪಸ್ಥಿತರಿದ್ದರು.