ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಗರ್ಭಧಾರಣೆ ಪ್ರಕರಣ: ಆರೋಪಿಗೆ ೨೦ ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ೨೦ ವರ್ಷ ಕಠಿಣ ಸಜೆ ಮತ್ತು ೧ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಕಾಸರಗೋಡು ತಳಂಗರೆ ನಿವಾಸಿ ದೀಕ್ಷಿತ್ ಟಿ.ಕೆ ಅಲಿಯಾಸ್ ವಾವಾ(೨೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
೨೦೧೬ ಮಾರ್ಚ್ ತಿಂಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ಆರೋಪಿ ಬಾಲಕಿಗೆ ಹಲವು ದಿನಗಳಲ್ಲಾಗಿ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ದೂರಿನಂತೆ ಆರೋಪಿಯ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಅಬ್ದುಲ್ ರಹೀಂ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಶನ್ ಪರವಾಗಿ ಸ್ಪೆಷಲ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.