ಮದ್ಯದ ಅಮಲಿನಲ್ಲಿ ಸಹೋದರರ ಮಧ್ಯೆ ಜಗಳ: ತಮ್ಮನನ್ನು ಗುಂಡಿಕ್ಕಿ ಕೊಲೆಗೈದ ಅಣ್ಣ ಆರೋಪಿ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ಮದ್ಯದ ಅಮಲಿನಲ್ಲಿ ತಮ್ಮನನ್ನು ಅಣ್ಣ ಗುಂಡಿಕ್ಕಿ ಕೊಲೆಗೈದ ಭೀಕರ ಘಟನೆ ಕುಟ್ಟಿಕೋಲ್ ಸಮೀಪ ನಡೆದಿದೆ.
ಕುಟ್ಟಿಕೋಲ್ ನೂಂಞಂಗಾನಂ ಎಂಬಲ್ಲಿನ ನಾರಾಯಣನ್ ನಾಯರ್ ಎಂಬವರ ಪುತ್ರ ಅಶೋಕನ್ ನಾಯರ್ (೪೫) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಇವರ ಸಹೋದರ ಬಾಲಕೃಷ್ಣನ್ ನಾಯರ್ (೫೦) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನಿನ್ನೆ ಸಂಜೆ ಯಿಂದಲೇ ಅಶೋಕನ್ ನಾಯರ್ ಹಾಗೂ ಬಾಲಕೃಷ್ಣನ್ ನಾಯರ್ ಮಧ್ಯೆ ಮದ್ಯದಮಲಿನಲ್ಲಿ ಜಗಳ ಆರಂಭಗೊಂಡಿತ್ತೆನ್ನಲಾಗಿದೆ. ರಾತ್ರಿವರೆಗೂ ಜಗಳ ಮುಂದುವರಿದು ಅದು ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ಬಾಲಕೃಷ್ಣನ್ ನಾಯರ್‌ನ ಕಾಲಿಗೆ ಅಶೋಕನ್ ನಾಯರ್ ಕಲ್ಲೊಂದನ್ನು ಎತ್ತಿ ಹಾಕಿದ್ದಾರೆನ್ನಲಾ ಗಿದೆ. ಇದರಿಂದ ಕ್ಷುಪಿತಗೊಂಡ ಬಾಲಕೃಷ್ಣನ್ ನಾಯರ್ ಸಮೀ ಪದಲ್ಲೇ ಇರುವ ಮಾಧವನ್ ನಾಯರ್‌ರ ಮನೆಗೆ ತೆರಳಿ ಅಲ್ಲಿಂದ ಬೇಟೆಗೆ ಬಳಸುವ ಕೋವಿ ತಂದು ಅದರಿಂದ ಅಶೋಕನ್ ನಾಯರ್‌ಗೆ ಗುಂಡಿಕ್ಕಿದ್ದಾನೆಂದು ಹೇಳಲಾಗುತ್ತಿದೆ. ತೊಡೆಗೆ ಗುಂಡೇಟು ತಗಲಿ ಗಂಭೀರಗಾಯಗೊಂಡು ಆಶೋಕನ್ ನಾಯರ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಈ ಬಗ್ಗೆ ಅವರ ಪತ್ನಿ ತನ್ನ ಸಹೋದರನಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು. ಇದರಂತೆ ಅವರು ಓಮ್ನಿ ವ್ಯಾನ್ ಸಹಿತ ತಲುಪಿದ್ದಾರೆ.
ಆದರೆ ಮನೆ ಸಮೀಪಕ್ಕೆ ವ್ಯಾನ್ ತೆರಳಲಾಗದ ಹಿನ್ನೆಲೆಯಲ್ಲಿ ಜೀಪಿನಲ್ಲಿ ಆಸ್ಪತ್ರೆಗೆ ಕೊಂಡೊ ಯ್ಯಲಾಗಿದೆ. ರಾತ್ರಿ ೧೨ ಗಂಟೆಗೆ ಅಶೋಕನ್ ನಾಯರ್‌ರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು ಆದರೆ ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆನ್ನಲಾಗಿದೆ. ಘಟನೆ ಸ್ಥಳಕ್ಕೆ ತಲುಪಿದ ಬೇಡಗಂ ಪೊಲೀಸರು ಬಾಲಕೃಷ್ಣನ್ ನಾಯರ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನ ಕಾಲಿಗೆ ಕಲ್ಲು ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಕಾವಲಿನಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೃತ ಅಶೋಕನ್ ನಾಯರ್ ತಾಯಿ ಜಾನಕಿ ಯಾನೆ ದಾಕ್ಷಾಯಿಣಿ, ಪತ್ನಿ ಬಿಂದು, ಇನ್ನೋರ್ವ ಸಹೋದರ ಜನಾರ್ದನ, ಸಹೋದರಿಯರಾದ ಶೋಭಾ, ಗಂಗಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತಪಟ್ಟ ಅಶೋಕನ್ ನಾಯರ್ ಕಾಂಗ್ರೆಸ್ ಕಾರ್ಯಕರ್ತರಾ ಗಿದ್ದಾರೆನ್ನಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.