ಮಧೂರು ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆ ಸಮಾರೋಪ: 13ರಿಂದ ವಾರ್ಷಿಕ ಉತ್ಸವ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಳೆದ 12 ದಿನಗಳಿಂದ ಜರಗುತ್ತಿದ್ದ ಅಷ್ಟಬಂಧ ಬ್ರಹ್ಮಕಲಶ ಮೂಡಪ್ಪಸೇವೆಯ ಸಮಾರೋಪ ನಿನ್ನೆ ಜರಗಿತು. ಇದರಂಗವಾಗಿ ಬೆಳಿಗ್ಗೆ ಪಂಚವಿಂಶತಿ ಸಂಪ್ರೋಕ್ಷಣ ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಭಕ್ತಿ ಸಂಗೀತ, ಕುಣಿತ ಭಜನೆ, ಯಕ್ಷಗಾನ ಬೊಂಬೆಯಾಟ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಇದೇ ವೇಳೆ ಕ್ಷೇತ್ರದ ವಾರ್ಷಿಕ ಜಾತ್ರೆಗೆ ನಿನ್ನೆ ಗೊನೆ ಮುಹೂರ್ತ ನಡೆಸಲಾಯಿತು. ಈ ತಿಂಗಳ 13ರಿಂದ 17ರ ವರೆಗೆ ವಾರ್ಷಿಕೋತ್ಸವ ಜರಗಲಿದೆ. 14ರಂದು ಕಣಿ ಉತ್ಸವ, 16ರಂದು ಬೆಡಿ ಉತ್ಸವ, 13ರಂದು ಆರಾಟ್ ಮಹೋತ್ಸವ ನಡೆಯಲಿದೆ. ಐತಿಹಾಸಿಕವಾಗಿ ಜರಗಿದ ಮಧೂರು ಬ್ರಹ್ಮಕಲಶ ಮೂಡಪ್ಪಸೇವೆಯ ಅಂಗವಾಗಿ ಮಧೂರು ಪರಿಸರದ ಪಾವಿತ್ರ್ಯ ಹಾಗೂ ಸುಸ್ಥಿರ ಆರೋಗ್ಯ, ನೆಮ್ಮದಿಗಾಗಿ ಕ್ಲೀನ್ ಮಧೂರು ಯೋಜನೆಗೆ ನಿನ್ನೆ ಚಾಲನೆ ನೀಡಲಾಯಿತು. ಬಯಲು ಪ್ರದೇಶ, ದೇವಾಲಯದ ಅಂಗಣ, ಮಧುವಾಹಿನಿ ನದಿ ಪರಿಸರ, ಉಳಿಯತ್ತಡ್ಕ ಪರಿಸರದಲ್ಲಿ ಶುಚೀಕರಣ ನಡೆಸುವುದಾಗಿ ವಿವಿಧ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.