ಮನೆಗೆ ನುಗ್ಗಿ ಹಲ್ಲೆ: ದಂಪತಿ ಸಹಿತ ಐದು ಮಂದಿಗೆ ಗಾಯ
ಕುಂಬಳೆ: ಮನೆಗೆ ನುಗ್ಗಿದ ವ್ಯಕ್ತಿ ದಂಪತಿ ಸಹಿತ ಐದು ಮಂದಿಗೆ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.ಉಳುವಾರು ನಿವಾಸಿ ಮೊಹಮ್ಮದ್ ಕುಂಞಿ (೩೮), ಪತ್ನಿ ಹೈರುನ್ನಿಸ (೩೨), ಮಕ್ಕಳಾದ ಮುಬೀನ್ (೮), ಮುನವರ್ (೧೧), ಮೊಹಮ್ಮದ್ ಕುಂಞಿಯವರ ತಾಯಿ ಆಯಿಶಾಲಿ ಎಂಬಿವರು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಈ ಪೈಕಿ ಮೊಹಮ್ಮದ್ ಕುಂಞಿ ಹಾಗೂ ಪತ್ನಿ ಹೈರುನ್ನಿಸ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಿನ್ನೆ ಸಂಜೆ ಉಳುವಾರು ಬಾಯಿಕಟ್ಟೆಯ ಅಬ್ದುಲ್ಲ ಎಂಬಾತ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಮೊಹಮ್ಮದ್ ಕುಂಞಿ ಹಾಗೂ ಅಬ್ದುಲ್ಲ ಸೇರಿ ವರ್ಷಗಳ ಹಿಂದೆ ಶೇಣಿಯಲ್ಲಿ ಆಹಾರ ತಯಾರಿ ಸಂಸ್ಥೆ ಆರಂಭಿಸಿದ್ದರೆನ್ನಲಾಗಿದೆ. ಈ ವೇಳೆ ಪಾಲುದಾರಿಕೆಗಾಗಿ ಅಬ್ದುಲ್ಲ ೧೭ ಪವನ್ ಚಿನ್ನಾಭರಣ ನೀಡಿದ್ದನೆನ್ನಲಾಗಿದೆ. ಆದರೆ ಅನಂತರ ಕಾಡಿದ ಕೊರೋನಾದಿಂದಾಗಿ ಸಂಸ್ಥೆ ನಷ್ಟದಲ್ಲಿ ಸಿಲುಕಿದ್ದು ಅದರಿಂದ ಮುಚ್ಚುಗಡೆಗೊಳಿಸಲಾಗಿತ್ತು. ಬಳಿಕ ಮೊಹಮ್ಮದ್ ಕುಂಞಿ ಎರ್ನಾಕುಳಂಗೆ ಕೆಲಸಕ್ಕಾಗಿ ತೆರಳಿದ್ದರೆನ್ನಲಾಗಿದೆ. ಇದೇ ವೇಳೆ ಅಬ್ದುಲ್ಲ ತಾನು ನೀಡಿದ ೧೭ ಪವನ್ ಚಿನ್ನಾಭರಣ ನೀಡಬೇಕೆಂದು ಮೊಹಮ್ಮದ್ ಕುಂಞಿಯೊಂದಿಗೆ ಕೇಳತೊಡಗಿದ್ದನು. ಇದೇ ವಿಷಯಕ್ಕೆ ಸಂಬಂಧಿಸಿ ಇತ್ತೀಚೆಗೆ ಮೊಹಮ್ಮದ್ ಕುಂಞಿಯ ಪುತ್ರನಿಗೆ ಅಬ್ದುಲ್ಲ ಬೆದರಿ ಕೆಯೊಡ್ಡಿರುವುದಾಗಿಯೂ ದೂರಲಾಗಿದೆ. ಈ ವಿಷಯ ತಿಳಿದು ಮೊಹಮ್ಮದ್ ಕುಂಞಿ ನಿನ್ನೆ ಮನೆಗೆ ಆಗಮಿಸಿದ್ದರು. ಈ ವಿಷಯ ತಿಳಿದು ಅಬ್ದುಲ್ಲ ಮನೆಗೆ ತಲುಪಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.