ಮನೆಯೊಳಗೆ ಮೂರು ಮಂದಿಯ ಮೃತದೇಹ ಪತ್ತೆ : ಪತ್ನಿ, ತಾಯಿಯ ಕೊಂದು ನೇಣು ಬಿಗಿದ ಮಧ್ಯವಯಸ್ಕ
ಹೊಸದುರ್ಗ: ತಾಯಿ ಹಾಗೂ ಪತ್ನಿಯ ಕುತ್ತಿಗೆಯನ್ನು ಕೇಬಲ್ನಿಂದ ಬಿಗಿದು ಕೊಲೆಗೈದ ಬಳಿಕ ಮಧ್ಯವಯಸ್ಕ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಮೂವರ ಮೃತದೇಹ ಪತ್ತೆಯಾಗಿದೆ. ಕಾಞಂಗಾಡ್ ಬಸ್ ನಿಲ್ದಾಣ ಪರಿಸರದಲ್ಲಿ ವಾಚ್ ವರ್ಕ್ಸ್ ಅಂಗಡಿ ನಡೆಸುವ ಸೂರ್ಯಪ್ರಕಾಶ್ (೫೫), ಪತ್ನಿ ಗೀತಾ (೪೮), ತಾಯಿ ಲೀಲಾ (೯೩)ರ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ಈ ಕುಟುಂಬ ಇಲ್ಲಿನ ಮುತ್ತಪ್ಪನ್ ಕ್ಷೇತ್ರ ಸಮೀಪದ ಹಬೀಬ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದಾರೆ. ಇದೇ ಕ್ವಾರ್ಟರ್ಸ್ನ ಮಲಗುವ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಲೀಲಾ ಹಾಗೂ ಗೀತಾರ ಮೃತದೇಹ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದರೆ, ಸೂರ್ಯಪ್ರಕಾಶ್ರ ಮೃತದೇಹ ಅಡುಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿತ್ತು. ತಾಯಿ ಹಾಗೂ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಬಳಿಕ ನೇಣು ಬಿಗಿದು ಸೂರ್ಯ ಪ್ರಕಾಶ್ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಆರ್ಥಿಕ ಹೊರೆಯೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಸೂರ್ಯಪ್ರಕಾಶ್ ಬರೆದಿಟ್ಟಿದ್ದೆನ್ನಲಾದ ಒಂದು ಪತ್ರ ಮನೆಯಿಂದ ಲಭಿಸಿದ್ದು, ಆರ್ಥಿಕ ಸ್ಥಿತಿ ಹದಗೆಟ್ಟ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ. ಕುತ್ತಿಗೆ ಬಿಗಿದ ಕೇಬಲ್ ಸ್ಥಳದಿಂದ ಪತ್ತೆಹಚ್ಚಲಾಗಿದೆ.
ಸೂರ್ಯಪ್ರಕಾಶ್- ಗೀತಾ ದಂಪತಿಗೆ ಮೂರು ಮಕ್ಕಳಿದ್ದು, ಇಬ್ಬರು ಹೆಣ್ಮಕ್ಕಳನ್ನು ವಿವಾಹ ಮಾಡಿಕೊq ಲಾಗಿದೆ. ಪುತ್ರ ಅಜಯ್ ಉದ್ಯೋಗ ನಿಮಿತ್ತ ಎರ್ನಾಕುಳಂನಲ್ಲಿ ವಾಸವಾ ಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹೊಸದುರ್ಗ ಪೊಲೀಸರು ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ನೂರಾರು ಮಂದಿ ಕ್ವಾರ್ಟರ್ಸ್ಗೆ ತಲುಪುತ್ತಿದ್ದಾರೆ. ಫಾರೆನ್ಸಿಕ್ ವಿಭಾಗ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದರು.
ಮೃತ ದಂಪತಿ ಪುತ್ರನ ಹೊರತಾಗಿ ಪುತ್ರಿಯರಾದ ಐಶ್ವರ್ಯ, ಆರ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.