ಮಳೆಗಾಲ ರೋಗ ವಿರುದ್ಧ ಜಾಗ್ರತೆ ಪಾಲಿಸಲು ಜಿಲ್ಲಾ ವೈದ್ಯಾಧಿಕಾರಿ ಕರೆ
ಕಾಸರಗೋಡು: ಮಳೆಗಾಲ ಆರಂಭದೊಂದಿಗೆ ಸಾಂಕ್ರಾಮಿಕ ರೋಗ ಹರಡಲು ಸಾಧ್ಯತೆ ಇರುವ ಕಾರಣ ಪ್ರತಿರೋಧ ಚಟುವಟಿಕೆ ಗಳನ್ನು ತೀವ್ರಗೊಳಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮ್‌ದಾಸ್ ಸೂಚಿಸಿದ್ದಾರೆ. ಸಾಂಕ್ರಾಮಿಕ ರೋಗ ನಿಯಂತ್ರಣ ಚಟುವಟಿಕೆಗಳನ್ನು ಪ್ರತಿಯೊಬ್ಬರೂ ವಹಿಸಿಕೊಂಡು ಜ್ವರ ಲಕ್ಷಣಗಳು ಕಂಡುಬರುವವರು ಸ್ವಯಂ ಚಿಕಿತ್ಸೆ ನಡೆಸದೆ ಆರೋಗ್ಯ ಸಂಸ್ಥೆಗಳಿಗೆ ತಲುಪಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಅವರು ಎಚ್ಚರಿಸಿದರು.
ರೋಗ ಪ್ರತಿರೋಧ ಚಟುವಟಿಕೆಗಳಂಗವಾಗಿ ಸೊಳ್ಳೆಗಳು ಹೆಚ್ಚುವುದನ್ನು ತಡೆಯಬೇಕು, ನೀರು ಕಟ್ಟಿ ನಿಲ್ಲದಂತೆ ಎಚ್ಚರ ವಹಿಸಬೇಕು, ನೀರು ಸಂಗ್ರಹಿಸುವ ಪಾತ್ರೆಗಳನ್ನು ಮುಚ್ಚಿಟ್ಟುಕೊಂಡಿರಬೇಕು, ವಾರದಲ್ಲಿ ಒಂದು ದಿನ ಡ್ರೈಡೇ ಆಚರಿಸಬೇಕು, ಮನೆಯಲ್ಲಿನ ಇಂಡೋರ್ ಪ್ಲಾಂಟ್‌ಗಳ ನೀರನ್ನು ವಾರಕ್ಕೆ ಒಂದು ದಿನ ಕಡ್ಡಾಯವಾಗಿ ಬದಲಿಸಬೇಕು, ಸೊಳ್ಳೆ ಕಚ್ಚುವುದನ್ನು ತಪ್ಪಿಸಿಕೊಳ್ಳಲು ಲೇಪನ ಅಥವಾ ಸೊಳ್ಳೆಬಲೆ ಉಪಯೋಗಿಸಬೇಕು, ಕುದಿಸಿ ತಣಿಸಿದ ನೀರನ್ನು ಮಾತ್ರ ಅಡುಗೆಗೆ ಹಾಗೂ ಕುಡಿಯಲು ಉಪಯೋಗಿಸಬೇಕು, ಬಾವಿಯನ್ನು ಕ್ಲೋರಿನೇಟ್ ನಡೆಸಬೇಕು, ಮಲಮೂತ್ರ ವಿಸರ್ಜನೆ ಬಳಿಕ ಕೈಕಾಲುಗಳನ್ನು ತೊಳೆದುಕೊಳ್ಳಬೇಕು, ಸಾರ್ವಜನಿಕ ಬಾವಿ, ಟ್ಯಾಪ್‌ಗಳನ್ನು ಶುಚಿಯಾಗಿರಿಸಬೇಕು ಎಂದು ಸೂಚಿಸಲಾಗಿದೆ.
ಉದ್ಯೋಗ ಖಾತರಿ ಕಾರ್ಮಿಕರು, ಕೃಷಿ ಕಾರ್ಮಿಕರು, ತೆಂಗಿನಮರವೇರುವ ಕಾರ್ಮಿಕರು, ಮೃಗಗಳನ್ನು ಪರಿಪಾಲಿಸುವವರು, ಶುಚೀಕರಣ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಮೊದಲಾದ ಮಲಿನಜಲ ಸಂಪರ್ಕ ಸಾಧ್ಯತೆಯಿರುವ ಕೆಲಸವನ್ನು ಮಾಡುವವರು ವಾರಕ್ಕೆ ಒಮ್ಮೆ ಡೋಕ್ಸಿ ಸೈಕ್ಲಿನ್ ೨೦೦ ಮಿಲ್ಲಿಗ್ರಾಂ ಮಾತ್ರೆಯನ್ನು ಆರೋಗ್ಯ ಕಾರ್ಯಕರ್ತರ ನಿರ್ದೇಶ ಪ್ರಕಾರ ಸೇವಿಸಿದರೆ ಇಲಿಜ್ವರ ಮೊದಲಾದ ರೋಗ ಸಾಧ್ಯತೆಯನ್ನು ತಡೆಗಟ್ಟಬಹುದೆಂದು ಅವರು ತಿಳಿಸಿದ್ದಾರೆ.