ಮಳೆಯಲ್ಲಿ ಕೊಚ್ಚಿ ಹೋದ ಭತ್ತ ಕೃಷಿಕರ ನಿರೀಕ್ಷೆ: ಗದ್ದೆಯಲ್ಲಿ ನೀರು ತುಂಬಿ ಹಾನಿ
ಮಂಜೇಶ್ವರ: ಮಳೆ ಸುರಿದು ಧರೆ ಸಂತಸದಿಂದ ತಂಪಾಗಿ ಇರುವಾಗಲೂ ಭೂಮಿಯಲ್ಲಿರುವ ಒಂದು ವಿಭಾಗ ಕಣ್ಣೀರು ಸುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನಿರೀಕ್ಷಿತವಾಗಿ ಅಕಾಲದಲ್ಲಿ ಸುರಿದ ಮಳೆಯಲ್ಲಿ ಕೃಷಿಕರ ಕಣ್ಣೀರೂ ಕರಗುತ್ತಿದೆ. ಅದರಲ್ಲೂ ಭತ್ತ ಕೃಷಿಕರ ಪರಿಸ್ಥಿತಿ ಸಂಕಷ್ಟಮಯವಾಗಿದೆ. ಕಷ್ಟಪಟ್ಟು ಮಾಡಿದ ಕೃಷಿ ಕೈಗೆ ಲಭಿಸುವ ವೇಳೆ ಮಳೆಗೆ ಹಾನಿಗೊಂಡಿರುವುದು ಕೃಷಿಕರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದೆ. ಮಂಜೇಶ್ವರ ಸಮೀಪದ ಕನಿಲ ಬಯಲಿನಲ್ಲಿ ನಿನ್ನೆ ಸುರಿದ ಮಳೆಗೆ ಭತ್ತ ಕೃಷಿ ಹಾನಿಗೊಂಡಿದೆ. ಕೊಯ್ಯಲು ಸಿದ್ಧವಾಗಿದ್ದ ಪೈರು ಗಾಳಿ ಮಳೆಗೆ ಬಿದ್ದು ಗದ್ದೆಯಲ್ಲಿ ನೀರು ತುಂಬಿ ಹಾನಿಯಾಗಿದೆ. ಸಕಾಲದಲ್ಲಿ ಕೊಯ್ಲಿಗೆ ಜನ ಲಭಿಸದಿರುವುದು ಕೂಡಾ ಇನ್ನೊಂದು ಸಮಸ್ಯೆಯಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರು ನೂರು ದಿನ ಕೆಲಸ ಮಾಡುವ ಕಾರಣ ಕೃಷಿ ಕೆಲಸಗಳಿಗೆ ಜನ ಲಭಿಸದೆ ಕಾಲಕಾಲದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡಲಾಗುತ್ತಿಲ್ಲವೆಂದು ಕೃಷಿಕರು ದೂರುತ್ತಾರೆ. ಇದಕ್ಕೆ ಕೃಷಿಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಬೇಕೆಂದು ಕೃಷಿಕರು ಆಗ್ರಹಿಸುತ್ತಾರೆ. ಕೊಯ್ಲಿಗೆ ಸಿದ್ಧವಾದ ಭತ್ತ ನಾಶವಾಗಿರುವುದನ್ನು ಲೆಕ್ಕ ಹಾಕಿ ಕೃಷಿಕರಿಗೆ ನಷ್ಟ ಪರಿಹಾರ ನೀಡದಿದ್ದರೆ ಭತ್ತ ಕೃಷಿಕರ ಬದುಕು ದುಸ್ತರವಾಗಲಿದೆ.
ಕಾಸರಗೋಡು, ಮಂಜೇಶ್ವರ ತಾಲೂಕುಗಳ ವಿವಿಧ ಕಡೆಗಳಲ್ಲಿ ನಡೆ ಸಿದ ಭತ್ತ ಕೃಷಿ ಕಳೆದ ಕೆಲವು ದಿನಗ ಳಿಂದ ಸುರಿದ ಮಳೆಗೆ ನಾಶವಾಗಿದ್ದು, ಮುಂದೆಯೂ ಮಳೆ ಜೋರಾಗಿ ಸುರಿದರೆ ಸಮಸ್ಯೆ ಬಿಗಡಾಯಿಸಲಿದೆ.