ಮಳೆ ತೀವ್ರ: ವ್ಯಾಪಕ ನಾಶನಷ್ಟ; ಮನೆ ಕುಸಿತ; ಕುಟುಂಬ ಅಪಾಯದಿಂದ ಪಾರು
ಕಾಸರಗೋಡು: ತೀವ್ರವಾಗಿ ಮುಂದುವರಿಯುತ್ತಿರುವ ಮುಂಗಾರು ಮಳೆಯಿಂದ ಜಿಲ್ಲೆಯ ವಿವಿಧೆಡೆ ವ್ಯಾಪಕ ನಾಶನಷ್ಟ ಸಂಭವಿಸಿದೆ. ನಿನ್ನೆ ಸುರಿದ ಮಳೆ ಹಾಗೂ ಬಿರುಗಾಳಿಗೆ ವಿವಿಧೆಡೆ ಮರಗಳು ಮುರಿದು ಬಿದ್ದಿವೆ. ಅಲ್ಲದೆ ಮನೆಗಳು ಕುಸಿದ ಬಗ್ಗೆ ವರದಿಯಾಗಿದೆ. ಮೊಗ್ರಾಲ್ ವಿಲ್ಲೇಜ್‌ನ ಚಳಿಯಂಗೋಡಿನಲ್ಲಿ ಬೀಫಾತಿಮ ಎಂಬವರ ಹೆಂಚಿನ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ಮನೆಯವರನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಅಡ್ಕತ್ತಬೈಲು ಉಮಾ ನಸ್ರಿಂಗ್ ಹೋಂನ ಮುಂಭಾಗ ಮರದ ರೆಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದೇ ವೇಳೆ ಜಿಲ್ಲೆಯಲ್ಲಿ ಮಳೆ ಇಂದು ಕೂಡಾ ಮುಂದುವರಿಯಲಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕೇರಳದ ಐದು ಜಿಲ್ಲೆಗಳಲ್ಲಿ ಮಳೆ ತೀವ್ರವಾಗಿ ಮುಂದುವರಿದಿದೆ. ಬಂಗಾಲ ಆಳ ಸಮುದ್ರದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕೇರಳ ಕರಾವಳಿಯಿಂದ ದಕ್ಷಿಣ ಗುಜರಾತ್ ಕರಾವಳಿ ವರೆಗೆ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಅಲ್ಲದೆ ಬಂಗಾಲ ಆಳಸಮುದ್ರದಲ್ಲಿ ಹಾಗೂ ಒಡಿಶ್ಶಾ ಕರಾವಳಿಯಲ್ಲಿ ವಾಯುಭಾರ ಕುಸಿತ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇರಳದಲ್ಲಿ ವ್ಯಾಪಕ ಮಳೆ ಹಾಗೂ ಮಿಂಚು, ಗಾಳಿ ಬೀಸಲು ಸಾಧ್ಯವಿದೆ.