ಮಹಿಳೆಯರ ಮೊಬೈಲ್ ಫೋನ್ ಹ್ಯಾಕ್ ಮಾಡಿ ದುರುಪಯೋಗ: ಆಟೋ ಚಾಲಕನ ದುಷ್ಕೃತ್ಯದಿಂದ ಆತಂಕಕ್ಕೀಡಾದ ನಾಗರಿಕರು
ಕುಂಬಳೆ: ಮಹಿಳೆಯರ ಮೊಬೈಲ್ ಫೋನ್ ಹ್ಯಾಕ್ ಮಾಡಿ ಅದನ್ನು ದುರುಪ ಯೋಗ ನಡೆಸುವ ಆಟೋಚಾಲಕನೋರ್ವನ ಕುಕೃತ್ಯದಿಂದ ನಾಗರಿಕರಲ್ಲಿ ಆತಂಕ ಮೂಡಿಸಿರುವುದಾಗಿ ದೂರಲಾಗಿದೆ.
ವಿದೇಶಗಳಲ್ಲಿ ಉದ್ಯೋಗದಲ್ಲಿರುವವರ ಪತ್ನಿಯರು ಪ್ರಯಾಣಿಸುತ್ತಿದ್ದಾಗ ಆಟೋರಿಕ್ಷಾವೊಂದರ ಚಾಲಕನೋರ್ವ ಕೆಲವರ ನಿದ್ದೆಗೆಡಿಸಿರುವುದಾಗಿ ದೂರಲಾಗಿದೆ.
ಪಚ್ಚಂಬಳ ನಿವಾಸಿಯಾದ ಓರ್ವ ಗಲ್ಫ್ ಉದ್ಯೋಗಿಯ ಪತ್ನಿಗೆ ಉಂಟಾದ ಸಂಶಯದ ಹಿನ್ನೆಲೆಯಲ್ಲಿ ಮೊಬೈಲ್ ಟೆಕ್ನೀಶಿಯನ್ನನ್ನು ಸಂಪರ್ಕಿಸಿ ತನ್ನ ಸಂಶಯವನ್ನು ವ್ಯಕ್ತಪಡಿಸಿದ್ದರು. ಆತ ಮೊಬೈಲ್ ಪೋನ್ನ್ನು ಸಮಗ್ರವಾಗಿ ಪರಿಶೀಲಿಸಿದಾಗ ಅದನ್ನು ಯಾರೋ ಹ್ಯಾಕ್ ಮಾಡಿರುವುದು ತಿಳಿದು ಬಂತು. ಗ್ಯಾಲರಿಯಲ್ಲಿರುವ ಫೋಟೋ, ಮತ್ತಿತರ ಮಾಹಿತಿಗಳನ್ನು ಯಾರೋ ಸಂಗ್ರಹಿಸುತ್ತಿದ್ದಾರೆಂದು ಟೆಕ್ನೀಶಿಯನ್ ಯುವತಿಯಲ್ಲಿ ತಿಳಿಸಿದರು. ಆದ್ದರಿಂದ ಆ ಮೊಬೈಲ್ಪೋನ್ ಉಪೇಕ್ಷಿಸಿ ಬೇರೆ ಮೊಬೈಲ್ ಖರೀದಿಸುವುದೇ ಸೂಕ್ತ ಎಂದು ಟೆಕ್ನೀಶಿಯನ್ ತಿಳಿಸಿದರು. ಯುವತಿ ಬೇರೆ ಮೊಬೈಲ್ ಖರೀದಿಸಿದ ಬಳಿಕ ತನ್ನ ಹ್ಯಾಕ್ ಮಾಡಲಾದ ಮೊಬೈಲ್ ಸಹಿತ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಓರ್ವ ಆಟೋ ಚಾಲಕ ಈ ಯುವತಿಯ ಮೊಬೈಲ್ ಪೋನ್ ದುರುಪಯೋಗ ಮಾಡಿದ್ದಾನೆಂದು ತಿಳಿದು ಬಂತು. ಫೋನ್ ಹ್ಯಾಕ್ ಮಾಡಿದ ಬಳಿಕ ಫೋಟೋ ಗಳನ್ನು ಮೋರ್ಫ್ ಮಾಡಿ ಪ್ರಚಾರ ನಡೆಸಲಾಗುತ್ತಿರಬಹು ದೆಂದು ಪೊಲೀಸರು ಸಂಶಯಿಸುತ್ತಿದ್ದಾರೆ. ಇದರಿಂದ ಮುಂದಿನ ತನಿಖೆಗೆ ಚಾಲನೆ ನೀಡಿದ ಪೊಲೀಸರು ಆಟೋ ಚಾಲಕನ ಮನೆಯಿಂದ ಲ್ಯಾಪ್ಟಾಪ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಆಟೋಚಾಲಕನಿಗೆ ತಾಕೀತು ನೀಡಿ ಪೊಲೀಸರು ಬಿಟ್ಟಿರುವುದಾಗಿ ನಾಗರಿಕರು ಹೇಳುತ್ತಿದ್ದಾರೆ. ಇದೇ ರೀತಿಯಲ್ಲಿ ಈ ಪ್ರದೇಶದ ಹಲವರು ಮಹಿಳೆಯರ ಮೊಬೈಲ್ಗಳನ್ನು ಈತ ಹ್ಯಾಕ್ ನಡೆಸಿರಬಹುದೇ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.