ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಸರ ಎಳೆದು ಕಳ್ಳ ಪರಾರಿ
ಕಾಸರಗೋಡು: ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ನಡೆದಿದೆ.
ಹೊಸದುರ್ಗ ಬಲ್ಲಾ ಕಡಪ್ಪುರದ ಮೈಮೂನಾ ಎಂಬಾಕೆಗೆ ಈ ಅನುಭವ ಉಂಟಾಗಿದೆ. ನಿನ್ನೆ ರಾತ್ರಿ ಮನೆ ಮುಂದೆ ಯಾವುದೋ ಶಬ್ದ ಉಂಟಾದಾಗ ಮೈಮೂನಾ ಮನೆಯ ಎದುರುಗಡೆಯ ಬಾಗಿಲು ತೆರೆದು ಹೊರ ಬಂದು ನೋಡಿದಾಗ ಹೊರಗಡೆ ಇದ್ದ ಕಳ್ಳನೋರ್ವ ಆಕೆಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಿಡಿದೆಳೆದಿದ್ದಾನೆ.
ಮೈಮೂನಾ ತಡೆದಾಗ ಸರ ತುಂಡಾಗಿ ಅದರ ಲೋಕೆಟ್ ಸೇರಿದಂತೆ ಒಂದು ತುಂಡು ಕಳ್ಳನ ಕೈಸೇರಿದೆ. ಮೈಮೂನಾ ಜೋರಾಗಿ ಬೊಬ್ಬೆ ಹಾಕಿದಾಗ ನೆರೆಮನೆಯವರು ಅಲ್ಲಿಗೆ ಓಡಿ ಬರುವಷ್ಟರಲ್ಲಿ ಕಳ್ಳ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಈ ಬಗ್ಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.