ಮಾದಕ ಗುಂಡಿಕ್ಕಿ ಕಾಡಿಗಟ್ಟಿದ ಕಾಡುಕೋಣ ಸಾವು
ಕಾಸರಗೋಡು: ಹೊಸದುರ್ಗ ಮಡಿಕೈ ಮೂನುರೋಡ್ ಜಂಕ್ಷನ್ನ ಬಳಿಯ ಪಿ. ಶೈಜು ಎಂಬವರ ಹಿತ್ತಿಲ ೨೦ ಅಡಿ ಆಳದ ಕಳೆದ ರವಿವಾರದಂದು ಬಾವಿಗೆ ಬಿದ್ದು ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ೧೨ ತಾಸುಗಳ ಬಳಿಕ ಅರಣ್ಯ ಪಾಲಕರು, ಪೊಲೀಸರು ಮತ್ತು ಊರವರು ಸೇರಿ ಮೇಲಕ್ಕೆತ್ತಿ ನಂತರ ಮಾದಕ ಗುಂಡಿಕ್ಕಿ ಕಾಡಿಗೆ ಅಟ್ಟಲಾದ ಕಾಡುಕೋಣ ಸಾವನ್ನಪ್ಪಿದೆ.
ಈ ಕಾಡುಕೋಣವನ್ನು ಬೇತೂರುಪಾರಕ್ಕೆ ಸಮೀಪದ ಪಳ್ಳಂಜಿಯ ಅರಣ್ಯದಲ್ಲಿ ಅರಣ್ಯಪಾಲಕರು ಬಿಟ್ಟಿದ್ದರು. ನಿನ್ನೆ ಬೆಳಿಗ್ಗೆ ಅದು ಪಳ್ಳಂಜಿ ಮಹಾಗನಿ ತೋಟದ ರಸ್ತೆ ಬಳಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಮಧ್ಯಾಹ್ನ ಅದು ಅಲ್ಲೇ ಸಾವನ್ನಪ್ಪಿದೆ. ಕುಟ್ಟಿಕ್ಕೋಲ್ ಸರಕಾರಿ ವೆಟರ್ನರಿ ಕೇಂದ್ರದ ಡಾ. ಜಯಕೃಷ್ಣನ್ ಸ್ಥಳಕ್ಕೆ ಆಗಮಿಸಿ ಈ ಕಾಡುಕೋಣ ಕಳೇಬರವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದರು.
ಡಿಎಫ್ಒ ಕೆ. ಅಶ್ರಫ್ರ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಕಳೆಬರವನ್ನು ಅಲ್ಲೇ ಬಳಿಕ ಹೂತುಹಾಕಲಾಯಿತು. ನ್ಯುಮೋನಿಯಾ ತಗಲಿರುವುದೇ ಕಾಡುಕೋಣದ ಸಾವಿಗೆ ಕಾರಣವಾಗಿದೆ ಎಂಬ ಪ್ರಾಥಮಿಕ ನಿಗಮನಕ್ಕೆ ಬರಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.