ಮಾವುತನ ಜೊತೆ ಪರಾರಿಯಾದ 18ರ ಹರೆಯದ ಯುವತಿ ರೈಲು ನಿಲ್ದಾಣದಿಂದ ಸೆರೆ
ಕಾಸರಗೋಡು: ಕೋಟ್ಟಯಂ ನಿವಾಸಿಯಾದ ಮಾವುತನ ಜೊತೆ ಪರಾರಿಯಾದ 18ರ ಹರೆಯದ ಯುವತಿಯನ್ನು ಪೊಲೀಸರು ಗಂಟೆಗಳ ಮಧ್ಯೆ ಸೆರೆ ಹಿಡಿದು ಹೆತ್ತವರಿಗೆ ಒಪ್ಪಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಯುವತಿ ಕೋ ಟ್ಟಯಂ ನಿವಾಸಿಯಾದ ಪ್ರಿಯ ತಮನ ಜೊತೆ ಪರಾರಿಯಾಗಿದ್ದಳು. ಪ್ರಿಯತಮೆಯನ್ನು ಕರೆದುಕೊಂಡು ಹೋಗಲು ನಿನ್ನೆ ಸಂಜೆ 5 ಗಂಟೆಗೆ ಯುವಕ ಆಕೆಯ ಮನೆ ಸಮೀಪ ತಲುಪಿದ್ದನು. ಪ್ರಿಯತಮನನ್ನು ಕಂಡಕೂಡಲೇ ಯುವತಿ ಮನೆಯಿಂದ ತೆರಳಿದ್ದಳು. 6 ಗಂಟೆ ಸಮಯಕ್ಕೆ ಪುತ್ರಿ ನಾಪತ್ತೆಯಾಗಿ ದ್ದಾಳೆಂದು ಹೆತ್ತವರು ಮೇಲ್ಪರಂಬ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೇಳಿಕೆ ದಾಖಲಿಸುತ್ತಿದ್ದ ಮಧ್ಯೆ ಸಿವಿಲ್ ಪೊಲೀಸ್ ಆಫೀಸರ್ ಮಿತೇಶ್ ಯುವತಿಯ ಮೊಬೈಲ್ ಫೋನ್ ಲೊಕೇಶನ್ ಪತ್ತೆಹಚ್ಚಿರುವುದು ಪರಾರಿ ಕಥೆಯ ಗತಿ ಬದಲಿಸಿತು. ಕಾಸರಗೋಡು ರೈಲ್ವೇ ನಿಲ್ದಾಣ ಪರಿಸರದಲ್ಲಿ ಯುವತಿ ಇರುವುದು ಇದರಿಂದ ತಿಳಿದು ಬಂದಿತ್ತು. ಈ ವಿಷಯವನ್ನು ಎಸ್ಐ ಕೆ. ವೇಲಾಯುಧನ್ ಕೂಡಲೇ ರೈಲ್ವೇ ಪೊಲೀಸರಿಗೆ ತಿಳಿಸಿದರು. ಗುರುತು ಹಿಡಿಯಲು ಯುವತಿಯ ಭಾವಚಿತ್ರವನ್ನು ಕಳುಹಿಸಿ ಕೊಡಲಾಯಿತು. ಬಳಿಕ ಎಸ್ಐಯ ನೇತೃತ್ವದಲ್ಲಿ ಮೇಲ್ಪರಂಬ್ ಪೊಲೀಸರು ರೈಲ್ವೇ ಸ್ಟೇಷನ್ಗೆ ತಲುಪಿ ಯುವತಿಗಾಗಿ ಹುಡುಕಾಟ ಆರಂಭಿಸಿದರು. ಈ ಮಧ್ಯೆ ಕೋಟ್ಟಯಂ ನಿವಾಸಿಯಾದ ಮಾವುತನ ಜೊತೆ ಯುವತಿಯನ್ನು ಪತ್ತೆಹಚ್ಚಲಾಗಿದೆ. ತಿರುವನಂತಪುರಕ್ಕೆ ತೆರಳಲೆಂದು ರೈಲಿನ ಟಿಕೆಟ್ ತೆಗೆದು ಇವರು ಕಾಯುತ್ತಿದ್ದರು. ಬಳಿಕ ಇಬ್ಬರನ್ನೂ ಕಸ್ಟಡಿಗೆ ತೆಗೆದು ಮೇಲ್ಪರಂಬ ಠಾಣೆಗೆ ಕರೆತರಲಾಗಿದ್ದು, ನಂತರ ಯುವತಿಯನ್ನು ಹೆತ್ತವರ ಜೊತೆ ಬಿಟ್ಟುಕೊಡಲಾಗಿದೆ.