ಮೀನು ಹಿಡಿಯುತ್ತಿದ್ದ ವೇಳೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಶೋಧ: ಮುಳುಗುತಜ್ಞ ಈಶ್ವರ ಮಲ್ಪೆ ಇಂದು ಕೀಯೂರಿಗೆ
ಕಾಸರಗೋಡು: ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವೇಳೆ ಕೀಯೂರು ಬಂದರಿನಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾದ ಚೆಮ್ನಾಡ್ ನಿವಾಸಿ ರಿಯಾಸ್ ಎಂಬವರನ್ನು ಇನ್ನೂ ಪತ್ತೆಹಚ್ಚಲಾಗಲಿಲ್ಲ. ನಾಗರಿಕರು, ಅಗ್ನಿಶಾಮಕದಳ, ಮೀನುಗಾರಿಕಾ ಇಲಾಖೆ ಹಾಗೂ ಪೊಲೀಸರು ಸಂಯುಕ್ತವಾಗಿ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಶೋಧ ನಡೆಸಲು ಕರ್ನಾಟಕದಿಂದ ಮುಳುಗುತಜ್ಞ ಈಶ್ವರ ಮಲ್ಪೆ ಇಂದು ತಲುಪುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಈಶ್ವರ ಮಲ್ಪೆ ಕರ್ನಾಟಕದ ಶಿರೂರಿನಲ್ಲಿ ಕಲ್ಲಿಕೋಟೆಯ ಅರ್ಜುನ್‌ರ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದರು. ಕಳೆದ ಶನಿವಾರ ಮುಂಜಾನೆ ಆರು ಗಂಟೆ ವೇಳೆ ಮೀನು ಹಿಡಿಯಲು ತೆರಳಿದ ರಿಯಾಸ್ ಬಳಿಕ ನಾಪತ್ತೆಯಾಗಿದ್ದಾರೆ. ಬಂದರು ಸಮೀಪ ರಿಯಾಸ್‌ರ ಸ್ಕೂಟರ್ ಹಾಗೂ ಗಾಳಕ್ಕೆ ಉಪಯೋಗಿಸುವ ಸಾಮಗ್ರಿಗಳು ಪತ್ತೆಯಾಗಿತ್ತು. ಗಾಳ ಹಾಕುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿರಬಹುದೆಂಬ ಸಂಶಯದಿಂದ ಕಳೆದ ನಾಲ್ಕು ದಿನಗಳಿಂದ ಚಂದ್ರಗಿರಿ ಹೊಳೆ ಸಹಿತ ವಿವಿಧೆಡೆ ಶೋಧ ನಡೆಸಲಾಗುತ್ತಿದೆ. ಬೇಪೂರು ಕೋಸ್ಟಲ್ ಗಾರ್ಡ್ ಎಂಆರ್‌ಎಸ್‌ಸಿಯ ಡೋಣಿಯರ್ ವಿಮಾನವೂ ಶೋಧ ನಡೆಸಿತ್ತು. ಇದೇ ವೇಳೆ ಶೋಧ ಕಾರ್ಯ ತೀವ್ರಗೊಳಿಸಿಲ್ಲ ವೆಂದು ಆರೋಪಿಸಿ ನಾಗರಿಕರು ನಿನ್ನೆ ರಸ್ತೆ ತಡೆ ಚಳವಳಿ ನಡೆಸಿದ್ದರು. ನಾಪತ್ತೆ ಯಾದ ರಿಯಾಸ್‌ರ ಸ್ನೇಹಿ ತರು, ಸಂಬಂಧಿಕರು ಹಾಗೂ ನಾಗರಿಕರು ಸೇರಿ ಚಂದ್ರಗಿರಿ ಸೇತುವೆ ಮೇಲೆ ರಸ್ತೆ ತಡೆ ನಡೆಸಿದ್ದರು. ಬಳಿಕ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಜನಪ್ರತಿನಿಧಿಗಳು ಹಾಗೂ ಚಳವಳಿ ನಿರತರೊಂದಿಗೆ ಚರ್ಚೆ ನಡೆಸಿದ್ದರು. ಶೋಧ ನಡೆಸಲು ಮುಳುಗು ತಜ್ಞರನ್ನು ಕರೆಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಕೆಎಂ ಅಶ್ರಫ್‌ರ ವಿನಂತಿಯಂತೆ ಈಶ್ವರ ಮಲ್ಪೆ ಇಂದು ತಲುಪುವರೆಂದು ತಿಳಿಸಲಾಗಿದೆ. ಯುವಕನನ್ನು ಪತ್ತೆಹಚ್ಚಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳ ಬೇಕೆಂದು ವಿನಂತಿಸಿ ಮುಸ್ಲಿಂ ಲೀಗ್ ಜಿಲ್ಲಾ ಸೆಕ್ರೆಟರಿ ಅಬ್ದುಲ್ ರಹ್ಮಾನ್ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಹಾರ್ಬ ರ್‌ನಲ್ಲಿ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಸರಕಾರದ ಪರಾಭವವೆಂದು ಮುಸ್ಲಿಂ ಯೂತ್ ಲೀಗ್ ಆರೋಪಿಸಿದೆ.