ಮುಷ್ಕರ ಚಪ್ಪರದಲ್ಲಿ ಆತ್ಮಹತ್ಯೆ ಯತ್ನ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕ್ವಾರೆ ಮಾಲಕ ಆಸ್ಪತ್ರೆಗೆ
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೆಂಪುಕಲ್ಲು ಕ್ವಾರೆ ಮಾಲಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟ ಕಾಲ ಉಪವಾಸ ಮುಷ್ಕರ ಚಪ್ಪರದಲ್ಲಿ ಕ್ವಾರೆ ಮಾಲಕ ಆತ್ಮಹತ್ಯೆಗೆ ಯತ್ನಿಸಿದರು. ನೀಲೇಶ್ವರ ಮಡಿಕೈ, ಮಲಪ್ಪಚ್ಚೇರಿ ನಿವಾಸಿ ಕೆಂಪುಕಲ್ಲು ಕ್ವಾರೆ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷನಾಗಿರುವ ಗೋಪಾಲಕೃಷ್ಣನ್ (60) ಆತ್ಮಹತ್ಯೆಗೆ ಯತ್ನಿಸಿದವರು. ಇವರನ್ನು ಗಂಭೀರ ಸ್ಥಿತಿಯಲ್ಲಿ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ತಡರಾತ್ರಿವರೆಗೆ ಇವರು ಏನೋ ಬರೆಯುತ್ತಿದ್ದರೆಂದು ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಅದು ಮುಷ್ಕರದ ಚಪ್ಪರದಲ್ಲಿ ಹೇಳಲಿದ್ದ ಘೋಷವಾಕ್ಯ ಗಳಾಗಿರಬಹುದೆಂದು ಅಲ್ಲಿದ್ದವರು ಊಹಿಸಿದ್ದರು. ಒಂದು ಗಂಟೆ ವೇಳೆಗೆ ಗೋಪಾಲಕೃಷ್ಣನ್ ಅಸ್ವಸ್ಥರಾದರು. ಬಳಿಕ ಅವರು ವಿಷ ಸೇವಿಸಿರುವು ದಾಗಿ ತಿಳಿದುಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಲಾಯಿ ತು. ವೈದ್ಯರು ನಡೆಸಿದ ತಪಾಸಣೆಯಲ್ಲಿ ವಿಷ ಹೊಟ್ಟೆಯೊಳಗೆ ಸೇರಿರುವುದು ಖಚಿತಪಡಿಸಲಾಗಿದೆ. ಶರ್ಟ್ನ ಜೇಬಿನಿಂದ ಆತ್ಮಹತ್ಯೆ ಪತ್ರ ಪತ್ತೆಹಚ್ಚಲಾಯಿತು. ಕೆಂಪುಕಲ್ಲು ಕ್ವಾರೆ ಕಾರ್ಯಾಚರಿಸುವುದಕ್ಕೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಸಾಲ ಬಾಧೆಯಿಂದ ತತ್ತರಿಸುತ್ತಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.