ಮುಸ್ಲಿಂ ಲೀಗ್ ಉಮೇದ್ವಾರರ ಘೋಷಣೆ
ಕಲ್ಲಿಕೋಟೆ: ಯುಡಿಎಫ್ನ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಕೂಡಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಉಮೇದ್ವಾರರ ಹೆಸರನ್ನು ವಿದ್ಯುಕ್ತವಾಗಿ ಪ್ರಕಟಿಸಿದೆ.
ಇದರಂತೆ ಮಲಪ್ಪುರಂ ಲೋಕಸಭಾ ಕ್ಷೇತ್ರದಲ್ಲಿ ಇ.ಟಿ, ಮೊಹಮ್ಮದ್ ಬಶೀರ್ ಹಾಗೂ ಪೊನ್ನಾನಿ ಲೋಕ ಸಭಾ ಕ್ಷೇತ್ರದಲ್ಲಿ ಅಬ್ದುಲ್ ಸಮದ್ ಸಮದಾನಿ ಸ್ಪರ್ಧಿಸಲಿದ್ದಾರೆಂದು ಮುಸ್ಲಿಂ ಲೀಗ್ ನೇತಾರರು ತಿಳಿಸಿದ್ದಾರೆ. ಈ ಪೈಕಿ ಇ.ಟಿ. ಮೊಹಮ್ಮದ್ ಬಷೀರ್ ಈಗ ಪೊನ್ನಾನಿ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಆ ಕ್ಷೇತ್ರ ಬಿಟ್ಟು ಅವರು ಮುಂದಿನ ಚುನಾವಣೆಯಲ್ಲಿ ಮಲಪ್ಪುರಂ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ತಮಗೆ ಮೂರು ಲೋಕಸಭಾ ಸೀಟು ನೀಡಬೇಕೆಂಬ ಬೇಡಿಕೆಯನ್ನು ಮುಸ್ಲಿಂ ಲೀಗ್ ಯುಡಿಎಫ್ನ ಮುಂದಿರಿಸಿತ್ತು. ಆದರೆ ತಮ್ಮ ಸೀಟನ್ನು ಮುಸ್ಲಿಂಲೀಗ್ಗೆ ಬಿಟ್ಟುಕೊಡಲು ಕಾಂಗ್ರೆಸ್ ತಯಾರಾಗಲಿಲ್ಲ. ಅದರಿಂದ ಮುಸ್ಲಿಂ ಲೀಗ್ ಈಗಿರುವ ತನ್ನ ಎರಡು ಸೀಟುಗಳಲ್ಲೇ ಸಂತೃಪ್ತಿಪಡಬೇಕಾಗಿ ಬಂದಿದೆ.
ಲೋಕಸಭಾ ಹೆಚ್ಚುವರಿ ಸೀಟಿನ ಬದಲು ಮುಸ್ಲಿಂ ಲೀಗ್ಗೆ ಹೆಚ್ಚುವರಿಯಾಗಿ ಒಂದು ರಾಜ್ಯಸಭಾ ಸೀಟು ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.