ಮೂರು ರಾಜ್ಯಗಳ ಮುಖ್ಯಮಂತ್ರಿ ಹುದ್ದೆ ಬಿಜೆಪಿ ಉನ್ನತ ಮಟ್ಟದ ಸಭೆ ಇಂದು
ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ್‌ಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ, ಈ ಮೂರೂ ರಾಜ್ಯಗಳ ಹೊಸ ಮುಖ್ಯ ಮಂತ್ರಿ ಹುದ್ದೆಗಾಗಿ ಹೆಸರನ್ನು ಅಂತಿಮ ಗೊಳಿಸುವ ಬಿಜೆಪಿಯ ಉನ್ನತ ಮಟ್ಟದ ಸಭೆ ದಿಲ್ಲಿಯಲ್ಲಿ ಇಂದು ನಡೆಯಲಿದೆ.
ಆದರೆ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಬಿಜೆಪಿ ಈ ತನಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗಳಿಗೆ ಹೊಸ ಮುಖಗಳನ್ನು ಪರಿಚಯಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ವರದಿಗಳು ಸೂಚಿಸುತ್ತಿವೆ. ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಬಿಜೆಪಿ ಇನ್ನೂ ಸಸ್ಪೆನ್ಸ್ ಆಗಿಯೂ ಉಳಿಸಿಕೊಂಡಿದೆ. ರಾಜ ಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂದರ ರಾಜ್ ಸಿಂಧ್ಯಾ ಅವರು ದಿಲ್ಲಿಗೆ ತೆರಳಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಹೊಸ ಮುಖ್ಯಮಂತ್ರಿ ರೇಸ್‌ನಲ್ಲಿ ನಾನು ಇಲ್ಲವೆಂದು ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ತಿಳಿಸಿದ್ದು, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ. ಇದರಿಂದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಪಟ್ಟ ಹೊಸ ಮುಖಕ್ಕೆ ಲಭಿಸಬಹುದೇ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಉಂಟಾಗಿದೆ. ಇದೇ ರೀತಿ ಛತ್ತೀಸ್‌ಗಢ್ ಸಿ.ಎಂ ಹುದ್ದೆ ತೀರ್ಮಾನವೂ ಇಂದು ಉಂಟಾಗಲಿದೆ.