ಮೂಸೋಡಿಯಲ್ಲಿ ಮತ್ತೊಂದು ಮನೆ ಸಮುದ್ರಪಾಲು: ಕುಟುಂಬ ಸ್ಥಳಾಂತರ
ಉಪ್ಪಳ: ಮೂಸೋಡಿಯಲ್ಲಿ ಇತ್ತೀಚೆಗೆ ಒಂದು ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಇನ್ನೊಂದು ಮನೆ ಸಮುದ್ರಪಾಲಾಗುವ ಸ್ಥಿತಿ ಎದುರಾಗಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂಸೋಡಿಯಲ್ಲಿ ಇಸ್ಮಾಯಿಲ್ ಎಂಬವರ ಮನೆ ಸಮುದ್ರದ ಅಲೆಗೆ ಕೊಚ್ಚಿಹೋಗುವ ಭೀತಿ ಇದೆ. ನಿನ್ನೆ ಸಂಜೆಯಿಂದ ವ್ಯಾಪಕ ಕಡಲ್ಕೊರೆತ ಉಂಟಾಗಿದ್ದು, ಮನೆಯ ಅಡಿಪಾಯ ಕೊರೆದು ಹೋಗಿ, ಗೋಡೆ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇದೆ. ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್, ವಿಲೇಜ್, ಫಿಶರೀಸ್ ಅಧಿಕಾರಿಗಳು ತಲುಪಿ ಪರಿಶೀಲಿಸಿದ್ದು, ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಈ ಪರಿಸರದಲ್ಲೇ ಇತ್ತೀಚೆಗೆ ಮೂಸಾ ಎಂಬವರ ಮನೆ ಸಮುದ್ರಪಾಲಾಗಿದೆ. ಇದೀಗ ಇನ್ನೂ ಹಲವು ಮನೆಗಳು ಅಪಾಯದಂಚಿನಲ್ಲಿದ್ದು, ಇವರನ್ನು ಈ ಹಿಂದೆ ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.