ಮೊಗ್ರಾಲ್‌ನಲ್ಲಿ ರೈಲ್ವೇಯಿಂದ ದಾರಿಮೊಟಕು: ಸ್ಥಳೀಯರ ಸಂಚಾರಕ್ಕೆ ತಡೆ
ಮೊಗ್ರಾಲ್: ಜನವಾಸ ವಲಯಗಳಲ್ಲಿ ದಾರಿಯನ್ನು ಮುಚ್ಚಿ ರೈಲ್ವೇ ಅಧಿಕಾರಿಗಳು ವಿದ್ಯಾರ್ಥಿಗಳ ಮದ್ರಸ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಪಡಿಸುತ್ತಿರುವುದಾಗಿ ದೂರಲಾಗಿದೆ. ಮಂಗಳೂರು- ಕಲ್ಲಿಕೋಟೆ ಮಧ್ಯೆ ಹೆಚ್ಚುವರಿ ರೈಲು ಗಾಡಿಗಳನ್ನು ಓಡಿಸುವ ವಿಷಯ ರೈಲ್ವೇ ಸಚಿವಾಲಯ ಪರಿಗಣಿಸುತ್ತಿರುವ ಮಧ್ಯೆ ರೈಲು ಹಳಿಗಳಲ್ಲಿ ಸುರಕ್ಷಿತತೆ ಹೆಚ್ಚಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರಂತೆ ಮೊಗ್ರಾಲ್ ಕೊಪ್ಪಳಂ ಜುಮಾ ಮಸೀದಿ ರಸ್ತೆ ಮುಚ್ಚಿದ ಬೆನ್ನಲ್ಲೇ ಮೊಗ್ರಾಲ್ ಮಿಲಾದ್ ನಗರದಲ್ಲಿ ಹಳಿ ದಾಟುವುದನ್ನು ತಡೆದಿದ್ದಾರೆ. ಇದರಿಂದಾಗಿ ನಾಂಗಿ ಕಡಪ್ಪುರ, ಗಾಂಧಿನಗರ ಎಸ್.ಸಿ. ಕಾಲನಿಯ ನೂರಾರು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಮಿಲಾದ್ ನಗರದಲ್ಲಿ ರೈಲು ಹಳಿ ದಾಟಲೆಂದು ಸ್ಥಾಪಿಸಿದ್ದ ಕಾಂಕ್ರೀಟ್‌ನಿಂದ ನಿರ್ಮಿಸಿದ ಮೆಟ್ಟಿಲುಗಳನ್ನು ಮುರಿದು ತೆಗೆದು ರೈಲ್ವೇ ಸ್ಥಳೀಯರ ಸಂಚಾರಕ್ಕೆ ಧಕ್ಕೆ ಉಂಟುಮಾಡಿದೆ. ಕೊಪ್ಪಳಂನಲ್ಲಿ ರಸ್ತೆ ತಡೆ ಸೃಷ್ಟಿಸಿದಾಗ ಸಂಬಂಧಪಟ್ಟವರು ಸಾಕಷ್ಟು ಮಧ್ಯಪ್ರವೇಶ ನಡೆಸದಿರುವುದೇ ಮೊಗ್ರಾಲ್‌ನಲ್ಲಿ ಸಂಪೂರ್ಣ ಸಂಚಾರ ದಾರಿಯನ್ನು ಮುಚ್ಚಲು ರೈಲ್ವೇಗೇ ಪ್ರೇರಣೆ ನೀಡಿರುವುದೆಂದು ಸ್ಥಳೀಯರು ಆರೋಪಿಸಿದ್ದಾರೆ.