ಮೊಗ್ರಾಲ್ ಶಾಲೆಯ ವಿದ್ಯಾರ್ಥಿಗಳಿಂದ ಸಹಪಾಠಿಗೆ ಮನೆ ಕೊಡುಗೆ
ಕುಂಬಳೆ: 2023-24 ಶೈಕ್ಷಣಿಕ ವರ್ಷದಲ್ಲಿ ಮೊಗ್ರಾಲ್ ಜಿವಿಎಚ್ಎಸ್ಎಸ್ ಘೋಷಿಸಿದ ಹೆಮ್ಮೆಯ ಯೋಜನೆಯಾದ ‘ಸಸ್ನೇಹಂ ಸಹಪಾಠಿ’ ಫಲಪ್ರಾಪ್ತಿಯತ್ತ ಸಾಗುತ್ತಿದೆ. ಹೆತ್ತವರು ತೀರಿಹೋದ ಒಂದು ಕುಟುಂಬದ ಮೂರು ಮಕ್ಕಳಿಗೆ ಮನೆ ನಿರ್ಮಿಸಿ ನೀಡುವುದು ಎಂಬ ಮೊಗ್ರಾಲ್ ಶಾಲೆಯ ಮಕ್ಕಳ ಧೀರ ತೀರ್ಮಾನ ಈಗ ಫಲಪ್ರಾಪ್ತಿಯತ್ತ ತಲುಪಿದೆ. ಪ್ರತೀ ದಿನವೂ ಮಿಠಾಯಿಗೆಂದು ಲಭಿಸುವ ಹಣವನ್ನು ಉಳಿಸಿ ತಮ್ಮ ತರಗತಿಯ ಅಧ್ಯಾಪಕನಿಗೆ ಹಸ್ತಾಂತರಿಸುವರು. ಅಧ್ಯಾಪಕ ಅದನ್ನು ಎಸ್ಆರ್ಜಿ ಸಂಚಾಲಕ ರಿಗೂ, ಬಳಿಕ ಯೋಜನೆಯ ಸಂಚಾಲಕರಿಗೂ ಆ ಮೊತ್ತವನ್ನು ದಿನಂಪ್ರತಿ ನೀಡಲಾಗುತ್ತಿತ್ತು. ಈ ರೀತಿ ಸಂಗ್ರಹಿಸಿದ ಮೊತ್ತ ಲಕ್ಷಾಂತರ ರೂ. ಆಗಿ ಪರಿವರ್ತನೆಗೊಂಡಿತು.
ಹೆತ್ತವರು ಇದಕ್ಕೆ ಬೆಂಬಲ ನೀಡಿದರು. ಅಧ್ಯಾಪಕರು, ಪೂರ್ವ ವಿದ್ಯಾರ್ಥಿಗಳು ಸಹಾಯ ಹಸ್ತ ಚಾಚಿದರು. ಪಿಟಿಎ, ಎಸ್ಎಂಸಿ, ಮದರ್ ಪಿಟಿಎ, ಸ್ಟಾಫ್ ಕೌನ್ಸಿಲ್ನ ಬೆಂಬಲವೂ ಲಭಿಸಿದಾಗ 11 ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದು ಪೂರ್ಣಗೊಂಡಿತು. ಈ ತಿಂಗಳಲ್ಲಿ ಕುಟುಂಬಕ್ಕೆ ಈ ಮನೆಯನ್ನು ಹಸ್ತಾಂತರಿಸುವ ಸಿದ್ಧತೆಯಲ್ಲಿ ಶಾಲಾ ಅಧಿಕಾರಿಗಳಿದ್ದು, ಸರಕಾರಿ ಶಾಲೆಯೊಂದರ ಅಧೀನದಲ್ಲಿ ಇಡೀ ಊರು ಒಂದಾಗಿ ಈ ಯೋಜನೆಗೆ ಬೇಕಾಗಿ ಸಹಾಯ ಮಾಡಿರುವುದು ಮಾದರಿ ಕಾರ್ಯವೆಂದು ಪ್ರಶಂಸಿಸಲಾಗುತ್ತಿದೆ.