ಯುಡಿಎಫ್ ಐತಿಹಾಸಿಕ ಗೆಲುವು
ಕೋಟ್ಟಯಂ: ಕೇರಳದ ಜನತೆ ಅತೀ ಕಾತರದಿಂದ ಕಾಯುತ್ತಿದ್ದ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಯುಡಿಎಫ್ ಮತ್ತೆ ಐತಿಹಾಸಿಕ ಗೆಲುವು ಸಾಧಿಸಿದೆ. ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾಂಗ್ರೆಸ್‌ನ ಚಾಂಡಿ ಉಮ್ಮನ್ ೩೭,೭೧೯ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಎಡರಂಗದ ಅಭ್ಯರ್ಥಿಯಾದ ಸಿಪಿಎಂನ ಜೈಕ್ ಸಿ ಥೋಮಸ್‌ರನ್ನು ಚಾಂಡಿ ಉಮ್ಮನ್ ಪರಾಭವಗೊಳಿಸಿದ್ದಾರೆ. ಚಾಂಡಿ ಉಮ್ಮನ್‌ರಿಗೆ ೮೦.೧೪೪ ಮತಗಳು ಲಭಿಸಿದೆ. ಇದೇ ವೇಳೆ ಜೈಕ್ ಸಿ ಥೋಮಸ್‌ರಿಗೆ ೪೨,೪೨೫ ಮತಗಳು, ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಲಿಜಿನ್‌ಲಾಲ್‌ರಿಗೆ ೬೫೫೮ ಮತಗಳು ಲಭಿಸಿದೆ. ಮಾಜಿ ಮುಖ್ಯಮಂತ್ರಿಯೂ, ಕಾಂಗ್ರೆಸ್ ನೇತಾರನೂ ಆಗಿದ್ದ ಉಮ್ಮನ್ ಚಾಂಡಿಯವರು ಈ ಮಂಡಲವನ್ನು ೫೩ ವರ್ಷಗಳ ಕಾಲ ಪ್ರತಿನಿಧೀಕರಿಸಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆದಿದೆ. ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಉಮ್ಮನ್ ಚಾಂಡಿಯವರ ಪುತ್ರ ಚಾಂಡಿ ಉಮ್ಮನ್‌ರನ್ನು ಕಣಕ್ಕಿಳಿಸಲಾಗಿತ್ತು. ಇದೀಗ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಮತ್ತೆ ಗೆಲುವು ಸಾಧಿಸಿ ದಾಖಲೆ ಸೃಷ್ಟಿಸಿದೆ.
ಈ ತಿಂಗಳ ೫ರಂದು ಇಲ್ಲಿ ಉಪಚುನಾವಣೆಯ ಮತದಾನ ನಡೆದಿತ್ತು. ಇಂದು ಬೆಳಿಗ್ಗೆ ಕೋಟ್ಟಯಂ ಬಸೇಲಿಯಸ್ ಕಾಲೇಜು ಆಡಿಟೋರಿಯಂನಲ್ಲಿ ಮತ ಎಣಿಕೆ ನಡೆದಿದೆ. ಉಮ್ಮನ್ ಚಾಂಡಿಯವರ ಅಗಲುವಿಕೆ ಬಳಿಕ ಈ ಮಂಡಲವನ್ನು ಯಾರು ಗೆಲುವು ಸಾಧಿಸುವರೆಂಬ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿತ್ತು.