ಯುವಕನಿಗೆ ಇರಿದ ಪ್ರಕರಣ : ನಾಲ್ವರು ಆರೋಪಿಗಳಿಗೆ ಸಜೆ, ದಂಡ
ಕಾಸರಗೋಡು: ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯಾ ಕೆ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ಎಂಟು ವರ್ಷ 9 ತಿಂಗಳ ಸಜೆ ಹಾಗೂ 30,000 ರೂ.ನಂತೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮಧೂರು ಚೆಟ್ಟುಂಗುಳಿಯ ಮೊಹಮ್ಮದ್ ಗುಲ್ ಫಾನ್ (32), ಮಧೂರು ಪಾರೆಕಟ್ಟೆಯ ಸಿನಾನ್ ಪಿ.ಎ (33), ಕಾಸರಗೋಡು ಅಣಂಗೂರು ಟಿಪ್ಪುನಗರ ಪಳ್ಳಿಕ್ಕಾಲ್‌ನ ಕೈಸಲ್ ಕೆ.ಎಂ (33) ಮತ್ತು ಅಣಂಗೂರು ಟಿ.ವಿ ಸ್ಟೇಶನ್ ರಸ್ತೆಯ ಮುಹಮ್ಮದ್ ಸಫ್ವಾನ್ (33) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿಗಳು ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
2019 ಜೂನ್ 25ರಂದು ರಾತ್ರಿ 10.15ಕ್ಕೆ ಮಧೂರು ಚೆಟ್ಟುಂಗುಳಿ ಎಂಬಲ್ಲಿ ಹೈದರ್ ಎಂಬವರ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ಕಂಡು ಅದನ್ನು ತಡೆಯಲೆತ್ನಿಸಿದ ಅಬ್ದುಲ್ ಅಸೀಸ್ ಮತ್ತು ಅಮೀರ್ ಎಂಬವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಅವರನ್ನು ಗಾಯಗೊಳಿಸಿದ ದೂರಿನಂತೆ ಈ ಮೇಲಿನ ನಾಲ್ಕು ಮಂದಿ ಸೇರಿದಂತೆ ಒಟ್ಟು ಐದು ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು. ಆ ಪ್ರಕರಣದಲ್ಲಿ ನ್ಯಾಯಾಲಯ ಈ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಯು.ಪಿ. ವಿಪಿನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಒಂದನೇ ಆರೋಪಿ ಶಾನೀಬ್ ಪಿ.ಕೆ. ತಲೆಮರೆಸಿಕೊಂಡಿದ್ದು, ಆದ್ದರಿಂದ ಆತನ ವಿರುದ್ಧದ ಕೇಸಿನ ವಿಚಾರ ಣೆಯನ್ನು ನ್ಯಾಯಾಲಯ ಪ್ರತ್ಯೇಕಗೊಳಿಸಿ ಮುಂದೂಡಿದೆ.
ಪ್ರೋಸಿಕ್ಯೂಶನ್ ಪರವಾಗಿ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ.ಚಂದ್ರಮೋಹನ್ ಹಾಗೂ ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.