ಯುವಕನ ಕೊಲೆ ಪ್ರಕರಣ: ಮಾಹಿತಿ ಸಂಗ್ರಹ ಬಳಿಕ ಮುಖ್ಯ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ತಲೆಮರೆಸಿಕೊಂಡ ಆರೋಪಿಗಳಿಗೆ ತೀವ್ರ ಶೋಧ
ಉಪ್ಪಳ: ಯುವಕನ್ನು ಗಲ್ಫ್‌ನಿಂದ ಊರಿಗೆ ಕರೆಸಿದ ಬಳಿಕ ಕಾರಿನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣದ ಮುಖ್ಯ ಆರೋಪಿಯಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಮಂಜೇಶ್ವರ ಪೊಲೀಸರು ನಿನ್ನೆ ಮರಳಿ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತನನ್ನು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗಿದೆ.
೨೦೨೨ ಜೂನ್ ೨೬ರಂದು ಪುತ್ತಿಗೆ ಮುಗುವಿನ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಅಬೂಬಕರ್ ಸಿದ್ದಿಕ್ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ನೂರ್‌ಶ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಈತ ಹೈಕೋರ್ಟ್‌ನ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದನು. ಬಳಿಕ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಮೂರು ದಿನಗಳ ಕಾಲಕ್ಕೆ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಯುವಕನನ್ನು ಅಪಹರಿಸಿ ಹಲ್ಲೆಗೈದು ಕೊಲೆ ನಡೆಸಿದ ಸ್ಥಳಕ್ಕೆ ನೂರ್‌ಶನನ್ನು ಕರೆದೊಯ್ದು ಪೊಲೀಸರು ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ.
ಇದೇ ವೇಳೆ ಈ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ೧೯ ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಒಟ್ಟು ೧೩ ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಇನ್ನು ಆರು ಮಂದಿ ಆರೋಪಿಗಳು ಸೆರೆಗೀಡಾಗಲು ಬಾಕಿಯಿದ್ದಾರೆ. ಮಂಜೇಶ್ವರ ಸಿ.ಐ ರಾಜೀವ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.