ಯುವಕ ತೋಡಿನಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಉದ್ಯೋಗ ನಿಮಿತ್ತ ಗಲ್ಫ್‌ಗೆ ತೆರಳುವ ಸಿದ್ಧತೆಯಲ್ಲಿದ್ದ ಯುವಕ ತೋಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನೆಕ್ರಾಜೆ ಉದ್ದಂ ನಿವಾಸಿ ರಮೇಶ್ ಶೆಟ್ಟಿಯವರ ಪುತ್ರ ಪ್ರವೀಣ್ ಕುಮಾರ್ ಶೆಟ್ಟಿ (32) ಮೃತಪಟ್ಟ ವ್ಯಕ್ತಿ. ಮೊನ್ನೆ ರಾತ್ರಿ ಮನೆ ಸಮೀಪದ ದೈವಸ್ಥಾನವೊಂದರಲ್ಲಿ ನಡೆದ ಸಭೆಯಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರ. ಬಳಿಕ ರಾತ್ರಿ 10 ಗಂಟೆಗೆ ಅಲ್ಲಿಂದ ಮನೆಗೆ ಮರಳಿದ್ದರು. ಆದರೆ ಮನೆಗೆ ತಲುಪಿರಲಿಲ್ಲ. ಇದರಿಂದ ಮನೆಯವರು ಹಾಗೂ ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ನಿನ್ನೆ ಸಂಜೆ ವೇಳೆ ಮನೆ ಸಮೀಪದ ತೋಡಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ದೈವಸ್ಥಾನದಿಂದ ಮನೆಗೆ ತೋಡಿನ ಬದಿಯಲ್ಲಾಗಿ ನಡೆದು ಹೋಗಬೇಕಾಗಿದೆ. ಹೀಗೆ ನಡೆದು ಹೋಗುತ್ತಿದ್ದಾಗ ಕಾಲು ಜಾರಿ ತೋಡಿಗೆ ಬಿದ್ದು ಸಾವನ್ನಪ್ಪಿರಬಹು ದೆಂದು ಅಂದಾಜಿಸಲಾಗಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇತ್ತೀಚಿನವರೆಗೆ ಕಾಸರಗೋಡಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್ ಶೆಟ್ಟಿ ಬಳಿಕ ಅಲ್ಲಿಂದ ಕೆಲಸ ಬಿಟ್ಟಿದ್ದರು. ಮುಂದಿನ ವಾರ ಉದ್ಯೋಗಕ್ಕಾಗಿ ಗಲ್ಪ್‌ಗೆ ತೆರಳಲು ನಿರ್ಧರಿಸಿದ್ದರು. ಅದಕ್ಕಿರುವ ಸಿದ್ಧತೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ.
ನೆಕ್ರಾಜೆ ಬಂಟರ ತರವಾಡು ಸದಸ್ಯನಾದ ಪ್ರವೀಣ್ ಕುಮಾರ್ ಶೆಟ್ಟಿ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು. ತಿಂಗಳುಗಳ ಹಿಂದೆ ನೆಕ್ರಾಜೆ ಬಳಿ ನಡೆದ ವಯನಾಟು ಕುಲವನ್ ಮಹೋತ್ಸವದಲ್ಲೂ ಸಕ್ರಿಯರಾಗಿದ್ದರು.
ಮೃತರು ತಂದೆ, ತಾಯಿ ಚಂದ್ರಕಲಾ, ಸಹೋದರಿಯರಾದ ಪ್ರಶಾಂತಿ, ಪ್ರಕೃತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವಕನ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಘಟನೆ ಕುರಿತು ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.