ಯುವತಿ ಕೈಯಿಂದ ಹಣ ಪಡೆದು ವಂಚನೆ: 10 ವರ್ಷ ಬಳಿಕ ಆರೋಪಿ ಮಹಿಳೆ ಸೆರೆ
ಬದಿಯಡ್ಕ: ಮಗಳ ಮದುವೆ ಅಗತ್ಯಕ್ಕೆಂದು ತಿಳಿಸಿ ಯುವತಿಯ ಕೈಯಿಂದ 2.85 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿಯಾದ ಮಹಿಳೆಯನ್ನು ಹತ್ತು ವರ್ಷಗಳ ಬಳಿಕ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕನ್ಯಪ್ಪಾಡಿ ಬಿಸಿರೋಡ್ ನಿವಾಸಿಯೂ ಈಗ ಕಲ್ಲಕಟ್ಟದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಫೀಸ ಕೆ. (56) ಎಂಬಾಕೆ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ ಕೊಡ್ಯಮ್ಮೆಯ ಸುಮಯ್ಯ ಎಂಬವರ ಕೈಯಿಂದ 2014 ಅಕ್ಟೋಬರ್ 15ರಂದು ನಫೀಸ 2.85 ಲಕ್ಷ ರೂಪಾಯಿ ಸಾಲವಾಗಿ ಪಡೆದು ಕೊಂಡಿದ್ದಳೆನ್ನಲಾಗಿದೆ. ಮಗಳ ಮದುವೆ ಅಗತ್ಯಕ್ಕೆಂದು ತಿಳಿಸಿ ಹಣ ಪಡೆದುಕೊಂಡಿದ್ದು ಅನಂತರ ಹಣ ಮರಳಿ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಸುಮಯ್ಯ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ವಿವಿಧೆಡೆ ಹುಡುಕಿದರೂ ನಫೀಸಳನ್ನು ಪತ್ತೆಹಚ್ಚಲಾಗಿರಲಿಲ್ಲ. ಇದೀಗ ಕಲ್ಲಕಟ್ಟದ ಬಾಡಿಗೆ ಮನೆಯಲ್ಲಿ ನಫೀಸ ಇರುವುದಾಗಿ ತಿಳಿದು ಅಲ್ಲಿಗೆ ಬದಿಯಡ್ಕ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಶ್ರೀನೇಶ್, ಅನಿತ ಎಂಬಿವರು ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.