ರಸ್ತೆತಡೆ ಚಳವಳಿ: ಬಿಜೆಪಿ ನೇತಾರ ಸೆರೆ, ಬಿಡುಗಡೆ; ಬಂಧನ ರಾಜಕೀಯಪ್ರೇರಿತ- ಬಿಜೆಪಿ
ಕಾಸರಗೋಡು: ರಸ್ತೆತಡೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ವಿಜಯ್ ಕುಮಾರ್ ರೈಯವರನ್ನು ಕಾಸರಗೋಡು ಪೊಲೀಸರು ನಿನ್ನೆ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಬಂಧಿಸಿದ್ದಾರೆ. ವಿಜಯ್ ಕುಮಾರ್‌ರನ್ನು ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ದಂಡ ಪಾವತಿಸಿದ ಬಳಿಕ ಅವರನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.
ವಿಜಯ್ ಕುಮಾರ್‌ರ ಬಂಧನ ರಾಜಕೀಯ ಪ್ರೇರಿತಕ್ರಮ ವಾದುದೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ. ರಾಜಕೀಯ ಹೋರಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಸರಲ್ಲಿ ವಿಜಯ್ ಕುಮಾರ್‌ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರೇನೂ ಕೊಲೆ ಅಥವಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದ ಬಿಜೆಪಿ ಜಿಲ್ಲಾಧ್ಯಕ್ಷರು, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಿಪಿಎಂ ನೇತಾರರನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಭದ್ರತೆ ಹೊಂದಿರುವ ರಾಜ್ಯಪಾಲರ ಮೇಲೆ ದಾಳಿ ನಡೆಸುವ ಸಿಪಿಎಂನ ಯುವಜನ ಸಂಘಟನೆಗಳಿಗೆ ಪೊಲೀಸರು ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಮಹಿಳೆಯರ ವಿರುದ್ಧ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯ, ಮಾದಕ ದ್ರವ್ಯ ಸಾಗಾಟ, ಮಕ್ಕಳ ಅಪಹರಣ ಇತ್ಯಾದಿಗಳನ್ನು ತಡೆಗಟ್ಟುವಲ್ಲಿ ಪರಾಜಯಗೊಂಡಿರುವ ಪೊಲೀಸರು ರಾಜಕೀಯ ಪ್ರಕರಣಗಳಲ್ಲಿ ಒಳಗೊಂಡ ಬಿಜೆಪಿ ನೇತಾರರನ್ನು ಬಂಧಿಸುವ ವಿಷಯದಲ್ಲಿ ಅತ್ಯುತ್ಸಾಹ ತೋರಿಸುತ್ತಿದ್ದಾರೆ.
ನ್ಯಾಯಯುತವಾದ ರೀತಿಯಲ್ಲಿ ಕಾರ್ಯವೆಸಗುತ್ತಿರುವ ಬಿಜೆಪಿ ನೇತಾರರನ್ನು ಪೊಲೀಸರು ಈ ರೀತಿ ಬೇಟೆಯಾಡುವ ರೀತಿಯನ್ನು ಕೊನೆಗೊಳಿಸದಿದ್ದರೆ ಬಿಜೆಪಿ ಅದನ್ನು ಕೈಕಟ್ಟಿ ನಿಂತು ನೋಡದೆಂದೂ ಜಿಲ್ಲಾಧ್ಯಕ್ಷರು ಮುನ್ನೆಚ್ಚರಿಕೆ ನೀಡಿದ್ದಾರೆ.