ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಮಂಜೇಶ್ವರ: ಮಂಜೇಶ್ವರ ವರ್ಕಾಡಿ, ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ, ಒಳರಸ್ತೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ. ಪರಿಸರ ನಾಶ ಮಾಡುವವರ ವಿರುದ್ಧ ಸ್ವಚ್ಛತೆಗೆ ಮಾನ್ಯತೆ ನೀಡದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮರಾ ಸ್ಥಾಪಿಸುವಂತೆ ಬಿಜೆಪಿ ಸರಕಾರಕ್ಕೆ ಆಗ್ರಹಿಸಿದೆ. ತ್ಯಾಜ್ಯ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವವರಿಗೆ ಪಂಚಾಯತ್ ಬಹುಮಾನ ನೀಡಬೇಕೆಂದು ಬಿಜೆಪಿ ಸಲಹೆ ಮಾಡಿದೆ. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಸಮೀಪದಲ್ಲೇ ತ್ಯಾಜ್ಯಗಳನ್ನು ಉದ್ದೇಶಪೂರ್ವಕ ಎಸೆಯಲಾಗುವ ಆರೋಪಗೊಂಡಿದೆ. ಪಂಚಾಯತ್ ಅಥವಾ ಜನಪ್ರತಿನಿಧಿಗಳು ಸ್ವಚ್ಛ ಮಾಡಿದರೆ ಮರುದಿನವೇ ಮತ್ತೆ ತ್ಯಾಜ್ಯ ಎಸೆಯಲಾಗುತ್ತಿದೆ. ಈ ಬಗ್ಗೆ ನಿಗಾ ಇರಿಸಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಲು ಬಿಜೆಪಿ ಆಗ್ರಹಿಸಿದೆ. ಸ್ವಚ್ಛ ಭಾರತ್ ಅಭಿಯಾನವನ್ನು ಉದ್ದೇಶಪೂರ್ವಕ ನಾಶಮಾಡಲು ಪ್ರಯತ್ನ ಮಾಡುವ ಕಿಡಿಗೇಡಿಗಳನ್ನು ಪತ್ತೆಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ಮಂಜೇಶ್ವರ ಮಂಡಲ ಸಭೆಯಲ್ಲಿ ಈ ಬಗ್ಗೆ ಆಗ್ರಹಿಸಲಾಗಿದೆ. ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಣಿಕಂಠ ರೈ, ಯಾದವ ಬಡಾಜೆ, ಹರಿಶ್ಚಂದ್ರ, ರಕ್ಷನ್ ಅಡೆಕಳ, ಕೆ.ವಿ. ಭಟ್, ಎ.ಕೆ. ಕಯ್ಯಾರ್, ಸುಬ್ರಹ್ಮಣ್ಯ ಭಟ್, ಜನಪ್ರತಿನಿಧಿಗಳು, ಯತೀರಾಜ್ ಶೆಟ್ಟಿ, ಚಂದ್ರಹಾಸ ಕಡಂಬಾರ್ ಭಾಗವಹಿಸಿದರು.