ರಸ್ತೆ ಸ್ಥಿತಿ ಶೋಚನೀಯ: ಮೊಗ್ರಾಲ್ ಶಾಲಾ ವಿದ್ಯಾರ್ಥಿಗಳಿಗೆ ಸಂಕಷ್ಟ
ಮೊಗ್ರಾಲ್: ಮೊಗ್ರಾಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಹಾನಿಗೊಂಡು, ನೀರು ಕಟ್ಟಿ ನಿಲ್ಲುತ್ತಿರುವ ಕಾರಣ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮೊಗ್ರಾಲ್ ಪೇಟೆಯ ಅಂಡರ್ ಪಾಸ್ ಮೂಲಕ ಸಾಗಿ ಶಾಲೆಗೆ ಹೋಗುವ ಪಿಡಬ್ಲ್ಯುಡಿ ಶಾಲಾ ರಸ್ತೆ ಹಾನಿಗೊಂಡಿದೆ. ವಾಹನಗಳು ಸಂಚರಿಸುವಾಗ ಕೆಸರು ನೀರು ಅಭಿಷೇಕದಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳದ ಸ್ಥಿತಿ ಉಂಟಾಗುತ್ತಿದೆ. ಸಮೀಪದ ವ್ಯಾಪಾರ ಸಂಸ್ಥೆಗಳಿಗೂ ಕೆಸರು ನೀರು ಎರಚಲ್ಪಡುತ್ತದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸಮೀಪ ಚರಂಡಿಯನ್ನು ಎತ್ತರದಲ್ಲಿ ನಿರ್ಮಿಸಿರುವುದೇ ಈ ರಸ್ತೆಯಲ್ಲಿ ನೀರು ಕಟ್ಟಿ ನಿಲ್ಲಲು ಹಾಗೂ ರಸ್ತೆ ಹಾನಿಗೊಳ್ಳಲು ಕಾರಣವೆಂದು ಸ್ಥಳೀಯರು ಆರೋಪಿಸುತ್ತಾರೆ. ರಸ್ತೆಯ ಶೋಚನೀಯಾವಸ್ಥೆ ಪರಿಹರಿಸಲು ೨೦೦ ಮೀಟರ್‌ನಷ್ಟು ಕಾಂಕ್ರೀಟ್ ಹಾಕಿ, ನೀರು ಚರಂಡಿಗೆ ಹರಿದು ಹೋಗುವ ರೀತಿಯಲ್ಲಿ ತುರ್ತಾಗಿ ಪರಿಹಾರ ಕಾಣಬೇಕೆಂದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.