ರಸ್ತೆ ಹೊಂಡಗಳಲ್ಲಿ ಒರತೆ: ಎಚ್ಚರಿಕೆ ಬೋರ್ಡ್ ಇಟ್ಟು ಕೈ ತೊಳೆದ ಅಧಿಕಾರಿಗಳು

ಕಾಸರಗೋಡು: ಚಂದ್ರಗಿರಿ ಸೇತುವೆ, ಎಂ.ಜಿ ರಸ್ತೆ, ಹಳೆಯ ಪ್ರೆಸ್‌ಕ್ಲಬ್ ಜಂಕ್ಷನ್ ಕಡೆಗಳಲ್ಲಿ ರಸ್ತೆಯಲ್ಲಿ ಕಂಡು ಬಂದಿರುವ ಹೊಂಡಗಳು ಪ್ರಯಾಣಿಕರಿಗೆ ಬೆದರಿಕೆ ಒಡ್ಡುತ್ತಿದ್ದು, ತಿಂಗಳುಗಳು ಕಳೆದರೂ ಅಧಿಕಾರಿಗಳು ಮೌನವಾಗಿದ್ದಾರೆ.

ಹೊಂಡಗಳು ರೂಪುಗೊಂಡ ಸ್ಥಳದಲ್ಲಿ ಪ್ಲಾಸ್ಟಿಕ್ ಡಬ್ಬಿಗಳನ್ನು ಇಟ್ಟು ಎಚ್ಚರಿಕೆಯ ಬ್ಯಾನರನ್ನು ಅಧಿಕಾರಿಗಳು ಅಳವಡಿಸಿದ್ದಾರೆ. ಆಳವಾದ ಹೊಂಡಗಳು ರಸ್ತೆಯಲ್ಲಿರುವ ಕಾರಣ ವಾಹನ ಚಲಾಯಿಸುವವರು ಜಾಗರೂಕತೆಯಿಂದ ಸಂಚರಿಸಬೇಕೆಂದು ಬ್ಯಾನರ್‌ನಲ್ಲಿ ಬರೆದಿಡಲಾಗಿದೆ. ಆದರೆ ಇಷ್ಟು ಮುಂಜಾಗ್ರತೆ ಅಧಿಕಾರಿಗಳು ವಹಿಸುವರೆಂದು ಊಹಿಸಿರಲಿಲ್ಲವೆಂದು ಸ್ಥಳೀಯರು  ಅಪಹಾಸ್ಯ ಮಾಡುತ್ತಿದ್ದಾರೆ. ಕೆಲವು ಪ್ಲಾಸ್ಟಿಕ್ ಡಬ್ಬಗಳು ಗಾಳಿಗೆ ಬಿದ್ದ ಕಾರಣ ರಾತ್ರಿ ವೇಳೆ ಇವುಗಳು ಕಣ್ಣಿಗೆ ಕಾಣದಾಗುತ್ತಿವೆ. ಹೊಂಡ ಮುಚ್ಚುವುದಕ್ಕಿರುವ ಕ್ರಮ ವಿಳಂಬ ವಾಗುತ್ತಿರುವ ಹಿನ್ನೆಲೆಯಲ್ಲಿ ಯುವಕರ ತಂಡವೊಂದು ಇತ್ತೀಚೆಗೆ ಹೊಂಡಗಳಿಂದ ಮೀನು ಹಿಡಿಯುವ ಪ್ರತಿಭಟನೆ ನಡೆಸಿತ್ತು. 

ಗುಡ್ಡೆಯನ್ನು ಕೊರೆದು ಜಲಮೂಲಗಳನ್ನು ತುಂಬಿಸಿ ಕಾಞಂಗಾಡ್- ಕಾಸರಗೋಡು ರಾಜ್ಯ ಹೆದ್ದಾರಿಯ ಅಂಗವಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ಆದುದರಿಂದ ರಸ್ತೆಯಲ್ಲಿ ಒರತೆ ಕೆಲವು ಕಡೆ ಕಂಡು ಬರುತ್ತಿದೆ. ಮಳೆ ಇಲ್ಲದಿದ್ದರೂ ಹೊಂಡಗಳಲ್ಲಿ ನೀರು ಕಟ್ಟಿ ನಿಲ್ಲುವುದು ಒರತೆಯಿಂದಾಗಿ ಎಂದು ತಿಳಿಯಲಾಗಿದೆ. ನೀರಿದ್ದ ಕಡೆಗಳಲ್ಲಿ ಎಷ್ಟೇ ಗಟ್ಟಿಯಾಗಿ ಡಾಮರೀಕರಣ ನಡೆಸಿದರೂ ರಸ್ತೆ ಕುಸಿದು ಬೀಳುವುದು ಖಂಡಿತವಾಗಿದೆ. ಮಳೆಗಾಲದಲ್ಲಿ ಈ ಸ್ಥಳಗಳಲ್ಲಿ ಬೃಹತ್ತಾದ ಹೊಂಡಗಳು ರೂಪುಗೊಳ್ಳುತ್ತಿವೆ.  ಹೊಂಡಗಳಲ್ಲಿ ನೀರು ನಿಂತಾಗ ಎಷ್ಟು ಆಳವಿದೆ ಎಂದು ತಿಳಿಯದೆ ಅಪಘಾತವು ಸಂಭವಿಸುತ್ತಿದೆ.

ಇದಕ್ಕೆ ಪರಿಹಾರವಾಗಿ ರಸ್ತೆಯ ಇಕ್ಕಡೆಗಳಲ್ಲೂ ಚರಂಡಿ ನಿರ್ಮಿಸಿ ಒರತೆಯ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ತಿಳಿಸುತ್ತಾರೆ. ರಸ್ತೆಯನ್ನು ಆಳದಲ್ಲಿ ಅಗೆದು ಜಲ್ಲಿ ತುಂಬಿಸಿ ಕಾಂಕ್ರೀಟ್ ನಡೆಸಬೇಕೆಂದು ನಿರ್ದೇಶಿಸುತ್ತಾರೆ. ಪ್ರತೀ ವರ್ಷವೂ ನವೀಕರಣೆ ನಡೆಸುವ ಕೆಲಸ ಮಾಡದೆ ಶಾಶ್ವತವಾಗಿ ರಸ್ತೆ ಉಳಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page