ರಾಜ್ಯದಲ್ಲಿ ಏರಿದ ಬಿಸಿಲ ಅಬ್ಬರ: ೪ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದಲ್ಲಿ ಈ ತಿಂಗಳಲ್ಲೇ ಬಿಸಿಲ ಅಬ್ಬರ ಜೋರಾಗತೊಡಗಿದೆ. ಚಳಿಗಾಲದ ಅವಧಿ ಇನ್ನೂ ಮುಗಿಯದೇ ಇರುವ ವೇಳೆಯಲ್ಲೇ ಈ ದೇವರ ನಾಡಿನಲ್ಲಿ ಈಗಾಗಲೇ ತೀವ್ರ ಬಿಸಿಲ ಝಳ ಆರಂಭಗೊಂಡಿದೆ.

ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ಬಿಸಿಲ ಪ್ರಭಾವ ಹೆಚ್ಚಾ ಗಿರುವ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಣ್ಣೂರು, ಕಲ್ಲಿಕೋಟೆ, ಆಲಪ್ಪುಳ ಮತ್ತು ಕೋಟಯಂ ಜಿಲ್ಲೆಗಳಲ್ಲಿ ಈ ಅಲರ್ಟ್ ಘೋಷಿಸಲಾಗಿದೆ. ಇದರಂತೆ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ಜನರು ಮನೆಯಿಂದ ಹೊರಬಾರದಂತೆ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬಿಸಿಲ ಝಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ಹೀಟ್ ಕ್ಲಿನಿಕ್’ಗಳನ್ನು ಆರಂಭಿಸಲು ರಾಜ್ಯ ಆರೋಗ್ಯ ಇಲಾಖೆ ಇನ್ನೊಂದೆಡೆ ತೀರ್ಮಾನಿಸಿದೆ. ಕೇರಳ ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ರಾಜ್ಯವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಸಮುದ್ರದ ನಂಟಿದೆ. ಮತ್ತೊಂದೆಡೆ ಈ ಬಾರಿಯ ಮಳೆಗಾಲದಲ್ಲಿ ನಿರೀಕ್ಷಿತ ಮಳೆ ಕೇರಳದಲ್ಲಿ ಸುರಿದಿರಲಿಲ್ಲ. ಹವಾಮಾನ ವೈಪರೀತ್ಯದ ಕಾರಣದಿಂದ ಕೇರಳದಲ್ಲಿ ಸಾಕಷ್ಟು ವ್ಯತ್ಯಯಗಳು ಉಂಟಾಗಿವೆ. ಇದುವೇ ಚಳಿಗಾಲದ ಈ ವೇಳೆಯಲ್ಲೇ ರಾಜ್ಯದಲ್ಲಿ ಬಿಸಿಲ ಅಬ್ಬರ ಹೆಚ್ಚಾಗಲು ಪ್ರಧಾನ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜನರು ಮಧ್ಯಾಹ್ನದ ವೇಳೆ ಅನಗತ್ಯ ಸಂಚಾರ ಮಾಡಬಾರದು. ತಲೆ ಮತ್ತು ದೇಹದ ಭಾಗಗಳು ಬಿಸಿಲಿಗೆ ತೆರೆದುಕೊಳ್ಳದಂತೆ ನೋಡಬೇಕೆಂದು ಇಲಾಖೆ  ಸೂಚನೆ ನೀಡಿದೆ.

ರಾಜ್ಯ ವಿಪತ್ತು ನಿರ್ವಹಣಾ ಘಟಕ ಮಾಡಿದ  ಶಿಫಾರಸ್ಸಿನಂತೆ ಆರೋಗ್ಯ ಇಲಾಖೆ ‘ಹೀಟ್ ಕ್ಲಿನಿಕ್’ಗಳನ್ನು ಆರಂಭಿಸುವ ತೀರ್ಮಾನಕ್ಕೆ ಬಂದಿದೆ. ಬಿಸಿಲಿನಿಂದ ಸುಸ್ತಾಗುವವರು, ನಿರ್ಜಲೀಕರಣಗೊಳ್ಳುವವರು, ಚರ್ಮರೋಗ ಇಲ್ಲವೇ ಇತರ ಸಮಸ್ಯೆ ಎದುರಿಸುವವರಿಗೆ ಹೀಟ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲಾಗುವುದು.

Leave a Reply

Your email address will not be published. Required fields are marked *

You cannot copy content of this page