ರಾಜ್ಯದಲ್ಲಿ ದಾಖಲಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹನ್ನೊಂದು ಪಟ್ಟು ಹೆಚ್ಚಳ

ಕಾಸರಗೋಡು: ಅಕ್ಟೋಬರ್ ತಿಂಗಳನ್ನು ರಾಷ್ಟ್ರೀಯ ಸೈಬರ್ ಭದ್ರತಾ ಮಾಸವನ್ನಾಗಿ ಆಚರಿಸಲಾಗುತ್ತದೆ. ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲುಗೊಳ್ಳುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹನ್ನೊಂದು ಪಟ್ಟು ಹೆಚ್ಚಾಗಿದೆ. 2016ರಲ್ಲಿ ರಾಜ್ಯದಲ್ಲಿ 283 ಸೈಬರ್ ಅಪರಾಧ ಪ್ರಕರಣಗಳು ದಾಖಲುಗೊಂಡಿದ್ದರೆ, 2023ರಲ್ಲಿ ಆ ಸಂಖ್ಯೆ 3295ಕ್ಕೇರಿದೆ. ಇನ್ನು ಈ ವರ್ಷ ಆಗಸ್ಟ್ 31ರ ತನಕ ಮಾತ್ರವಾಗಿ ಇಂತಹ 2446 ಪ್ರಕ್ರಣಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡಿವೆ.

ಕೇರಳದಲ್ಲಿ ಮಾತ್ರವಲ್ಲ ಸೈಬರ್ ಪ್ರಕರಣಗಳ ಸಂಖ್ಯೆ ವಿಶ್ವದಾದ್ಯಂತವಾಗಿ ಪ್ರತೀ ವರ್ಷ ಏರುತ್ತಲೇ ಸಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲೂ ಅನುದಿನ ಇಂತಹ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ‘ನಮ್ಮ ವಿಶ್ವವನ್ನು ಸುರಕ್ಷಿತವಾಗಿಸಿ’ ಎಂಬ ಸಂದೇಶ ಈ ಬಾರಿ ರಾಷ್ಟ್ರೀಯ ಸೈಬರ್ ಭದ್ರತಾ ಮಾಸಾಚರಣೆ ಆಚರಿಸಲಾಗುತ್ತಿದೆ. ಇದರಂತೆ ಸೈಬರ್ ದಾಳಿ, ವಂಚನೆ ಇತ್ಯಾದಿಗಳ ಬಗ್ಗೆ ಜನಜಾಗೃತಿ ಮೂಡಿಸುವ ಅಭಿಯಾನಗಳನ್ನೂ ಪೊಲೀಸರು ಆರಂಭಿಸಿದ್ದಾರೆ. ಜನರು ಅಲ್ಪ ಗಮನ ಹಾಗೂ ಜಾಗ್ರತೆ ವಹಿಸಿದಲ್ಲಿ ಸೈಬರ್ ವಂಚನೆ ಮತ್ತು ದಾಳಿಯಿಂದ ಪಾರಾಗಬಹುದೆಂದು  ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಸೈಬರ್ ವಂಚಕರ ಬಲೆಗೆ ಬಿದ್ದು ಅದೆಷ್ಟೇ ಮಂದಿ ಕೋಟಿಗಟ್ಟಲೆ ರೂಪಾಯಿ ಕಳೆದುಕೊಂಡಿದ್ದಾರೆ. ಆಕರ್ಷಕ ಉದ್ಯೋಗ, ಸಾಲ, ವಿಸಾ  ನೀಡವಿಕೆ, ವ್ಯಾಪಾರ ಇತ್ಯಾದಿಗಳ ಹೆಸರಲ್ಲಿ ಈ ವಂಚಕರು ಅತೀ ಹೆಚ್ಚು ಹಣ ಲಪಟಾಯಿಸುತ್ತಾರೆ. ಹೀಗೆ ವಂಚನೆಗೊಳಗಾಗುವವರು ತಕ್ಷಣ 1930 ಎಂಬ ನಂಬ್ರಕ್ಕೆ ಕರೆದು ದೂರು ನೀಡಬಹುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page