ರಾಜ್ಯದ ದೇವಸ್ಥಾನಗಳ ೫೦೦ ಕಿಲೋ ಗ್ರಾಂ ಚಿನ್ನ ಬ್ಯಾಂಕ್‌ಗೆ
ಕಾಸರಗೋಡು: ರಾಜ್ಯ ಮುಜರಾಯಿ ಮಂಡಳಿಯ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳ ಪೈಕಿ ನಿತ್ಯಪೂಜೆ ಹಾಗೂ ಕ್ಷೇತ್ರೋತ್ಸವದ ವೇಳೆ ಬಳಸದೇ ಇರುವ ಚಿನ್ನದ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿರೂಪದಲ್ಲಿ ಇರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಹೀಗೆ ಕ್ಷೇತ್ರಗಳ ಚಿನ್ನದ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಿ ಅದಕ್ಕೆ ಶೇ. ೨.೫ರಷ್ಟು ಬಡ್ಡಿ ಲಭಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪೋಸಿಟ್ ಸ್ಕೀಮ್ ಜ್ಯಾರಿಗೊ ಳಿಸಲು ರಾಜ್ಯ ಹೈಕೋರ್ಟ್ ಕೂಡಾ ಅನುಮತಿ ನೀಡಿದೆ.
ಇದರಂತೆ ದೇವಸ್ಥಾನಗಳ ಚಿನ್ನದ ಒಡವೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಯಲ್ಲಿ ಠೇವಣಿ ರೂಪದಲ್ಲಿ ಇರಿಸಲು ಮುಜರಾಯಿ ಮಂಡಳಿಗಳು ತೀರ್ಮಾನಿಸಿದ್ದು, ಆ ಬಗ್ಗೆ ಫೆ. ೧೪ರಂದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ರಾಜ್ಯ ಮುಜುರಾಯಿ ಮಂಡಳಿಯ ಆಶ್ರಯದಲ್ಲಿ ರಾಜ್ಯದಲ್ಲಿ ೧೨೫೨ ದೇವಸ್ಥಾನಗಳು ಒಳಗೊಂಡಿವೆ. ಇವುಗಳ ಚಿನ್ನದ ಒಡವೆಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗುವುದು. ಈ ಚಿನ್ನದ ಒಟ್ಟು ಮೌಲ್ಯ ೨೯೧,೫೦,೦೦,೦೦೦ ರೂ. ಆಗಿರುವುದಾಗಿ ಲೆಕ್ಕ ಹಾಕಲಾಗಿದೆ. ದೇವಸ್ಥಾನಗಳಲ್ಲಿ ಉಪಯೋಗಿಸದೆ ಪಾಳು ಬೀಳತೊಡಗಿರುವ ಪಾತ್ರೆ ಇತ್ಯಾದಿಗಳನ್ನು ಹರಾಜು ನಡೆಸಲಿರುವ ಅನುಮತಿಯನ್ನೂ ಹೈಕೋರ್ಟ್ ನೀಡಿದೆ. ೫೦೦ ಕಿಲೋ ಗ್ರಾಂ (ಒಟ್ಟು ೬೨,೫೦೦ ಪವನ್) ಚಿನ್ನದ ಒಡವೆ ವಿವಿಧ ಕ್ಷೇತ್ರಗಳಲ್ಲಿ ಉಪಯೋಗ ಶೂನ್ಯವಾಗಿ ಉಳಿದುಕೊಂಡಿದೆ. ಈ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದಲ್ಲಿ ಮುಜುರಾಯಿ ಮಂಡಳಿಗಳಿಗೆ ಬಡ್ಡಿ ರೂಪದಲ್ಲಿ ೭,೨೮,೭೫,೦೦೦ ರೂ. ಲಭಿಸುವ ನಿರೀಕ್ಷೆ ಇದೆ.