ರಾಜ್ಯಪಾಲರ ವಿರುದ್ಧ ಅರ್ಜಿ: ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್
ನವದೆಹಲಿ: ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇರಳ ಮತ್ತು ತಮಿಳುನಾಡು ಸರಕಾರಗಳು ರಾಜ್ಯಪಾಲರ ವಿರುದ್ಧ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ನಿನ್ನೆ ವಿಚಾರಣೆ ಆರಂಭಿಸಿದ್ದು, ಆ ಬಗ್ಗೆ ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇಂದ್ರ ಸರಕಾರಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮುಂದಿನ ಶುಕ್ರವಾರದೊಳಗೆ ಈ ನೋಟೀಸಿಗೆ ಸ್ಪಷ್ಟೀಕರಣ ನೀಡಬೇಕೆಂದು ನೋಟೀಸ್ನಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಲೋಕಾಯುಕ್ತ ತಿದ್ದುಪಡಿ ಮಸೂದೆ ಸೇರಿದಂತೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಇತರ ಹಲವು ಮಸೂದೆಗಳಿಗೆ ಇನ್ನೂ ಸಹಿ ಹಾಕದೆ ವಿಳಂಬ ಮಾಡುತ್ತಿದ್ದಾರೆಂದು ಕೇರಳ ಸರಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದೆ.
ಅದೇ ರೀತಿ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ೧೦ ಮಸೂದೆಗಳಿಗೆ ಒಪ್ಪಿಗೆ ನೀಡದೆ ಅದನ್ನು ರಾಜ್ಯಪಾಲ ಆರ್.ಎನ್. ರವಿ ಸರಕಾರಕ್ಕೆ ಹಿಂತಿರುಗಿಸಿದ್ದಾರೆ. ಇದೀಗ ಆ ಮಸೂದೆಗಳನ್ನು ಮರು ಅಂಗೀಕರಿಸಿ ಒಪ್ಪಿಗೆಗಾಗಿ ತಮಿಳುನಾಡು ಸರಕಾರ ಮತ್ತೆ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದೆ. ಆದರೆ ರಾಜ್ಯಪಾಲರು ಅದಕ್ಕೆ ಸಹಿ ಮಾಡದೆ ವಿಳಂಬ ಮಾಡುತ್ತಿದ್ದಾರೆಂದು ತಮಿಳುನಾಡು ಸರಕಾರವೂ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದೆ. ಈ ಹಿಂದೆ ರಾಜ್ಯಪಾಲರ ವಿರುದ್ಧ ಸಲ್ಲಿಕೆಯಾಗಿದ್ದ ಆರೋಪದ ಕುರಿತು ಮೌಖಿಕ ಅಭಿಪ್ರಾಯ ಹೊರಹಾಕಿದ್ದ ಸುಪ್ರೀಂಕೋರ್ಟ್ ಕಾಲಮಿತಿಯೊಳಗೆ ಕೆಲಸ ಮಾಡದಿರುವುದು ಗಂಭೀರ ವಿಷಯವಾಗಿದೆ ಎಂದು ಛಾಟಿ ಬೀಸಿತ್ತು.