ರಾಜ್ಯಪಾಲ ವಿರುದ್ಧ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮುಖ್ಯಮಂತ್ರಿಯಿಂದ ಪತ್ರ

ತಿರುವನಂತಪುರ: ರಾಜ್ಯಪಾಲರು ಮತ್ತು ಸರಕಾರದ ನಡುವಿನ  ಗುದ್ದಾಟ ಶಮನಗೊಳ್ಳದೆ ಇನ್ನೂ ಮುಂದುವರಿ ಯುತ್ತಿರುವಂತೆಯೇ  ಈ ವಿಷಯದಲ್ಲಿ ಸರಕಾರ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸಂವಿಧಾನಾತ್ಮಕ ಹೊಣೆಗಾರಿಕೆ ನಿರ್ವಹಿಸುತ್ತಿಲ್ಲವೆಂದು  ದೂರಿ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.  ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಸರಿಯಾಗಿ  ನಿರ್ವಹಿಸುತ್ತಿಲ್ಲ ಮಾತ್ರವಲ್ಲ, ರಾಜ್ಯಪಾಲರು ನಿರಂತರವಾಗಿ ಶಿಷ್ಟಾಚಾರ (ಪ್ರೊಟೋಕಾಲ್)ನ್ನೂ ಉಲ್ಲಂಘಿಸುತ್ತಿದ್ದಾರೆಂದೂ ಪತ್ರದಲ್ಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಇದು ಸರಕಾರ ಮತ್ತು ರಾಜ್ಯಪಾಲರ ಮಧ್ಯೆ ಈಗ ನಡೆಯುತ್ತಿರುವ ದ್ವಂದ್ವ ಯುದ್ಧವನ್ನು ಇನ್ನಷ್ಟು ಪರಾಕಾಷ್ಠೆಗೇರುವಂತೆ ಮಾಡತೊಡಗಿದೆ. ರಾಜ್ಯಪಾಲರ ನಡುವಿನ ಹಳಸಿದ ಸಂಬಂಧವನ್ನು ರಾಜ್ಯ ಸರಕಾರ ಗಂಭೀರವಾಗಿ ಕಾಣತೊಡಗಿದೆ ಯೆಂಬುವುದು ಇದರಿಂದ ಸ್ಪಷ್ಟಗೊ ಳ್ಳುತ್ತಿದೆ. ವಿಧಾನಸಭೆ ಅನುಮೋದನೆ ನೀಡಿದ ಹಲವು ವಿಧೇಯಕಗಳನ್ನು ರಾಜ್ಯಪಾಲರು ಈತನಕ ಅಂಕಿತ ಹಾಕದೆ ಅದನ್ನು ಬದಿಗಿರಿಸಿದ್ದಾರೆ. ಈ ವಿಷಯದಲ್ಲೂ ರಾಜ್ಯಪಾಲರು ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು  ನೆರವೇರಿಸುತ್ತಿಲ್ಲವೆಂದೂ ಸರಕಾರ ದೂರಿದೆ.

ಮುಖ್ಯಮಂತ್ರಿಯವರು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ  ತನ್ನ ವಿರುದ್ಧ  ಪತ್ರ ಬರೆದುದಕ್ಕೆ ಸಂಬಂಧಿಸಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಈ ತನಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಆವರು ಸದ್ಯದಲ್ಲೇ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page