ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಕಲೆಕ್ಟರೇಟ್ ಮಾರ್ಚ್ : ಪಿಣರಾಯಿ ವಿಜಯನ್ ಸರಕಾರ ಕೇರಳ ಕಂಡ ಅತೀ ಕೆಟ್ಟ ಆಡಳಿತ-ರವೀಶ ತಂತ್ರಿ ಕುಂಟಾರು
ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಕೇರಳ ಇದುವರೆಗೆ ಕಂಡ ಅತೀ ಕೆಟ್ಟ ಆಡಳಿತವಾಗಿದೆ. ಅಭಿವೃದ್ಧಿ ಕುಂಠಿತ ಗೊಳಿಸುವುದು ಹಾಗೂ ಭ್ರಷ್ಟಾಚಾರ ಈ ಸರಕಾರದ ಆಡಳಿತ ಸಾಧನೆಗಳಾಗಿವೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಆರೋಪಿಸಿದ್ದಾರೆ. ಪಿಣರಾಯಿ ವಿಜಯನ್ ಸರಕಾರದ ದುರಾಡಳಿತವನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡು ಕಲೆಕ್ಟರೇಟ್‌ಗೆ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುಡಿಎಫ್‌ಗೆ ಕೇರಳದಲ್ಲಿ ವಿಪಕ್ಷದಲ್ಲಿರಲು ಯಾವುದೇ ಅರ್ಹತೆಯಿಲ್ಲವೆಂದು ಸಾಬೀತುಗೊಂಡಿದೆ. ಎಲ್ಲಾ ವಿಷಯಗಳಲ್ಲೂ ಎಡರಂಗ ಹಾಗೂ ಐಕ್ಯರಂಗ ಹೊಂದಾಣಿಕೆಯನ್ನು ಮುಂದುವರಿಸುತ್ತಿವೆ. ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಕರ್ಯಗಳಿದ್ದರೂ ಕೇರಳ ಹಿಂದಕ್ಕೆ ಸಾಗುತ್ತಿದೆ. ಖಜಾನೆ ಖಾಲಿಯಾದ ಹಿನ್ನೆಲೆಯಲ್ಲಿ ಟ್ರಶರಿ ನಿಯಂತ್ರಣ ಏರ್ಪಡಿಸಬೇಕಾಗಿ ಬಂದರೂ ಸರಕಾರದ ಅನಗತ್ಯ ಖರ್ಚುಗಳಿಗೆ ಹಾಗೂ ಸಚಿವರುಗಳ ಆಡಂಬರಕ್ಕೆ ಯಾವುದೇ ಕಡಿಮೆಯಿಲ್ಲ. ಇದರ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ರವೀಶ ತಂತ್ರಿ ಕುಂಟಾರು ತಿಳಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ನೇತಾರರ ಸಹಿತ ಹಲವರು ಭಾಗವಹಿಸಿದರು.