ರಾಮೇಶ್ವರಕ್ಕೆ ಕಾಸರಗೋಡು ಮೂಲಕ ಮಂಗಳೂರಿನಿಂದ ನೂತನ ರೈಲು ಶೀಘ್ರ
ಕಾಸರಗೋಡು: ದೇಶದ ಪ್ರಮುಖ ತೀರ್ಥಾಟನೆ ಕೇಂದ್ರವಾದ ರಾಮೇಶ್ವರಕ್ಕೆ ಕಾಸರಗೋಡು ಮೂಲಕ ನೂತನ ರೈಲು ಶೀಘ್ರ ಆರಂಭಗೊಳ್ಳಲಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾಸರಗೋಡಿನಲ್ಲೂ ಈ ರೂಟಿಗೆ ನಿಲುಗಡೆಯಿರುವುದು. ಮಂಗಳೂರು- ರಾಮೇಶ್ವರ ಎಕ್ಸ್ ಪ್ರೆಸ್ (೧೬೬೨೨) ಪ್ರತೀ ಶನಿವಾರದಂದು ಸಂಜೆ ೭.೩೦ಕ್ಕೆ ಮಂಗಳೂರಿನಿಂದ ಹೊರಟು ಆದಿತ್ಯವಾರ ಬೆಳಿಗ್ಗೆ ೧೧.೪೫ಕ್ಕೆ ರಾಮೇಶ್ವರ ತಲುಪಲಿದೆ.
ರಾಮೇಶ್ವರ- ಮಂಗಳೂರು ಎಕ್ಸ್ಪ್ರೆಸ್ (೧೬೬೨೧) ಪ್ರತೀ ಆದಿತ್ಯವಾರ ಮಧ್ಯಾಹ್ನ ೨ ಗಂಟೆಗೆ ರಾಮೇಶ್ವರದಿಂದ ಹೊರಟು ಸೋಮವಾರ ಮುಂಜಾನೆ ೫.೫೦ಕ್ಕೆ ಮಂಗಳೂರಿಗೆ ತಲುಪಲಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಶೋರ್ನೂರ್, ಪಾಲಕ್ಕಾಡ್, ಪಳನಿ, ಒಟ್ಟನ್ಛತ್ರಂ, ಪೊಳ್ಳಾಚಿ, ದಿಂಡಿಗಲ್, ಮಧುರೆ, ಮಾನಾಮಧುರೈ, ರಾಮನಾಥಪುರಂ ಎಂಬೆಡೆ ಈ ರೈಲುಗಳಿಗೆ ನಿಲುಗಡೆಯಿರುವುದು. ತೀರ್ಥಾಟನೆ ಕೇಂದ್ರವಾದ ರಾಮೇಶ್ವರಕ್ಕೆ ಕೇರಳದಿಂದ ನೇರವಾಗಿ ರೈಲು ಸಂಚಾರ ಆರಂಭಿಸಬೇಕೆಂಬ ಬೇಡಿಕೆ ದೀರ್ಘಕಾಲದಿಂದ ಕೇಳಿ ಬರುತ್ತಿದೆ. ಇದನ್ನು ಪರಿಗಣಿಸಿ ಕೇಂದ್ರ ಸರಕಾರ ರೈಲು ಮಂಜೂರು ಮಾಡಿದೆ. ಇದರೊಂದಿಗೆ ಕಾಸರಗೋಡು ಸಹಿತ ಮಲಬಾರ್ ಪ್ರದೇಶದ ಜನತೆಯ ಸಂಚಾರ ಸಮಸ್ಯೆ ಮತ್ತಷ್ಟು ಕಡಿಮೆಯಾಗಲಿದೆ.