ರಾಷ್ಟ್ರಧ್ವಜ ಕೆಳಗಿಳಿಸುತ್ತಿದ್ದಾಗ ಶಾಕ್ ತಗಲಿ ಧರ್ಮಗುರು ದಾರುಣ ಮೃತ್ಯು: ಸಹಾಯಕ ಧರ್ಮಗುರುವಿಗೆ ಗಂಭೀರ
ಮುಳ್ಳೇರಿಯ: ರಾಷ್ಟ್ರಧ್ವಜ ವನ್ನು ಕೆಳಗಿಳಿಸುತ್ತಿದ್ದಾಗ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಇಗರ್ಜಿಯ ಧರ್ಮಗುರು ಮೃತಪಟ್ಟ ದಾರುಣ ಘಟನೆ ಮುಳ್ಳೇರಿಯದಲ್ಲಿ ಸಂಭವಿಸಿದೆ. ಅವರ ಜೊತೆಗಿದ್ದ ಸಹಾಯಕ ಧರ್ಮಗುರು ಗಂಭೀರ ಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮುಳ್ಳೇರಿಯ ಇನ್ಫೆಂಟ್ ಸೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ರೆವ. ಫಾ. ಮ್ಯಾಥ್ಯು ಕುಡಿಲಿಲ್ (ಶಿನ್ಸ್-3೦) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಅವರ ಜೊತೆಗಿದ್ದ ಸಹಾಯಕ ಧರ್ಮಗುರು ಫಾ. ಸೆಬಿನ್ ಜೋಸೆಫ್ (26) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಕಂಕನಾಡಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಸಂಜೆ 6 ಗಂಟೆ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಫಾ. ಮ್ಯಾಥ್ಯು ಕುಡಿಲಿಲ್ ಅವರು ದೇಲಂಪಾಡಿ ಸೆಂಟ್ ಮೆರಿಸ್ ಚರ್ಚ್‌ನ ಧರ್ಮಗುರು ಕೂಡಾ ಆಗಿದ್ದರು. ನಿನ್ನೆ ಸಂಜೆ ಪ್ರಾರ್ಥನೆ ಬಳಿಕ 6 ಗಂಟೆ ವೇಳೆ ಮುಳ್ಳೇರಿಯದ ಇಗರ್ಜಿಗೆ ತಲುಪಿದ ಫಾ. ಮ್ಯಾಥ್ಯು ಕುಡಿಲಿಲ್ ಹಾಗೂ ಫಾ. ಸೆಬಿನ್ ಜೋಸೆಫ್ ರಾಷ್ಟ್ರಧ್ವಜವನ್ನು ಕೆಳಗಿಳಿಸುತ್ತಿದ್ದಾಗ ಧ್ವಜಕಂಬದಲ್ಲಿ ಸಿಲುಕಿಕೊಂಡಿತ್ತು. ಆದ್ದರಿಂದ ರಾಷ್ಟ್ರಧ್ವಜ ಕಟ್ಟಿದ ಕಬ್ಬಿಣದ ಪೈಪ್‌ನ್ನು ಅವರಿಬ್ಬರು ಸೇರಿ ಎತ್ತಿದಾಗ ಅದು ಎಚ್‌ಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಇದರಿಂದ ಶಾಕ್ ತಗಲಿ ಫಾ. ಸೆಬಿನ್ ಜೋಸೆಫ್ ಹಾಗೂ ಪೈಪ್ ಹಿಡಿದಿದ್ದ ಮ್ಯಾಥ್ಯು ಕುಡಿಲಿಲ್ ಕೆಳಕ್ಕೆ ಬಿದ್ದಿದ್ದಾರೆ. ವಿಷಯ ತಿಳಿದು ತಲುಪಿದವರು ಅವರಿಬ್ಬರನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಫಾ. ಮ್ಯಾಥ್ಯು ಕುಡಿಲಿಲ್ ಮೃತಪಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ಕಣ್ಣೂರು ಇರಿಟ್ಟಿ ಎಡೂರ್ ನಿವಾಸಿಯಾದ ದಿ| ಬಾಬು ಹಾಗೂ ನನ್ಮ ದಂ ಪತಿಯ ಪುತ್ರನಾದ ಫಾ. ಮ್ಯಾಥ್ಯು ಕುಡಿಲಿಲ್ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಯೂ ಆಗಿದ್ದರು. ಇವರು ಈ ಹಿಂದೆ ಕುಡಿಯಾನ್‌ಮಲ, ನೆಲ್ಲಿಕ್ಕಾಂಪೊಯಿಲ್, ಚೆಂಬನ್ ತೊಟ್ಟಿ ಎಂಬೆಡೆಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು. ಒಂದೂವರೆ ವರ್ಷ ಹಿಂದೆ ಮುಳ್ಳೇರಿಯಕ್ಕೆ ಆಗಮಿಸಿದ್ದರು.