ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಪಘಾತ: ತಪ್ಪಿದ ದುರಂತ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಂತೆಯೇ ವಾಹನ ಅಪಘಾತಗಳು ನಿತ್ಯ ಘಟನೆಯಾಗಿ ಮಾರ್ಪಟ್ಟಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸಮೀಪ ನಿನ್ನೆ ಸಂಜೆ ಹಾಗೂ ಇಂದು ಬೆಳಿಗ್ಗೆ ಎರಡು ಅಪಘಾತಗಳು ನಡೆದಿದ್ದು, ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸೇತುವೆ ಸಮೀಪ ನಿನ್ನೆ ಸಂಜೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಹಾಗೂ ಕಾರು ಪರಸ್ಪರ ಢಿಕ್ಕಿ ಹೊಡೆದಿದ್ದು, ಮಂಜೇಶ್ವರ ನಿವಾಸಿ ಸಮೀರ್ ಎಂಬವರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಾಸರಗೋಡಿನಿಂದ ಮಂಜೇಶ್ವರ ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದಿವೆ.
ಇಂದು ಬೆಳಿಗ್ಗೆ ಆರಿಕ್ಕಾಡಿ ಹನುಮಾನ್ ಕ್ಷೇತ್ರ ಬಲಿ ಇನ್ನೋವಾ ಕಾರು ಹಾಗೂ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಈ ಎರಡೂ ಕಾರುಗಳು ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದವು. ಕ್ಷೇತ್ರ ಸಮೀಪ ಸರ್ವೀಸ್ ರಸ್ತೆಯಲ್ಲಿ ಚರಂಡಿ ನಿರ್ಮಿಸಿದ್ದು, ಈ ಪ್ರದೇಶ ಇಕ್ಕಟ್ಟಾಗಿದೆ. ಇದು ದೂರದಿಂದ ಗಮನಕ್ಕೆ ಬರುತ್ತಿಲ್ಲವೆನ್ನಲಾಗಿದೆ. ಇದರಿಂದ ಚರಂಡಿ ಸಮೀಪದಲ್ಲಿ ತಲುಪಿದ ಇನ್ನೋವಾ ಕಾರು ದಿಢೀರ್ ವೇಗ ನಿಯಂತ್ರಿಸಿದ್ದು, ಈ ವೇಳೆ ಅದರ ಹಿಂಬದಿಗೆ ಸ್ವಿಫ್ಟ್ ಕಾರು ಬಡಿದಿದೆ. ಇನ್ನೋವಾ ಕಾರಿನಲ್ಲಿ ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಅದೇ ರೀತಿ ಸ್ವಿಫ್ಟ್ ಕಾರಿನಲ್ಲಿ ಚೆರುವತ್ತೂರು ನಿವಾಸಿಗಳಾದ ಮೂರು ಮಂದಿಯಿದ್ದು, ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಅದೃಷ್ಟವಶಾತ್ ಇವರಿಬ್ಬರೂ ಅಪಘಾತದಲ್ಲಿ ಗಾಯಗೊಂಡಿಲ್ಲ. ಇವರು ಬೇರೆ ವಾಹನದಲ್ಲಿ ಪ್ರಯಾಣ ಮುಂದುವರಿಸಿದರು.