ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆತ್ತ ಹಿಡಿದು ಶಾಲಾ ವಿದ್ಯಾರ್ಥಿಗಳಿಂದ ಪರಸ್ಪರ ಮಾರಾಮಾರಿ: ಹಲವರಿಗೆ ಗಾಯ; 7 ವಿದ್ಯಾರ್ಥಿಗಳ ಅಮಾನತು
ವಿದ್ಯಾನಗರ: ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಬೆತ್ತ ಹಿಡಿದು ಪರಸ್ಪರ ಮಾರಾಮಾರಿಯಲ್ಲಿ ತೊಡಗಿ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವಿದ್ಯಾನಗರಕ್ಕೆ ಸಮೀಪದ ಬಿಸಿರೋಡ್‌ನಲ್ಲಿ ನಿನ್ನೆ ಸಂಜೆ ನಡೆದಿದೆ.
ನಾಯಮ್ಮಾರ್‌ಮೂಲೆ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ಈ ರೀತಿ ಪರಸ್ಪರ ಹೊಡೆದಾಡಿಕೊಂಡಿವೆ. ಕೈಯಲ್ಲಿ ಬೆತ್ತ ಹಿಡಿದು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡತೊಡಗಿದ್ದು, ಅದರಿಂದ ಕೆಲವೊಮ್ಮೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇತ್ತು. ಕಳೆದ ಸೋಮವಾರ ಮತ್ತು ಮಂಗಳವಾರವೂ ಇದೇ ಶಾಲೆಯ ವಿದ್ಯಾರ್ಥಿಗಳ ಎರಡು ಗುಂಪು ರಸ್ತೆಯಲ್ಲಿ ಪರಸ್ಪರ ಹೊಡೆದಾಟ ಮಾಡಿತ್ತು. ಅದಾದ ಬಳಿಕ ಎರಡು ತಂಡಕ್ಕೆ ಸೇರಿದ ವಿದ್ಯಾರ್ಥಿಗಳು ನಿನ್ನೆ ಸಂಜೆ ಬಿಸಿರೋಡ್ ಬಳಿ ಮತ್ತೆ ಪರಸ್ಪರ ಹೊಡೆದಾಟದಲ್ಲಿ ತೊಡಗಿದರು. ಆಗ ಭೀಕರ ವಾತಾವರಣ ಸೃಷ್ಟಿಯಾಯಿತು. ಮಾತ್ರವಲ್ಲ ಸಾರಿಗೆ ಸಂಚಾರಕ್ಕೂ ಅಡಚಣೆ ಸೃಷ್ಟಿಸಿತು. ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡುತ್ತಿದ್ದುದನ್ನು ಕಂಡ ಕೆಲವರು ಅವರನ್ನು ತಡೆಯಲೆತ್ನಿಸಿದರೂ ಆ ಪ್ರಯತ್ನವೂ ವಿಫಲಗೊಂಡಿತು. ವಿಷಯ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮಾರಾಮಾರಿಯಲ್ಲಿ ತೊಡಗಿದ್ದ ವಿದ್ಯಾ ರ್ಥಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಈ ಘರ್ಷಣೆ ಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಲವರ ಮುಖದಲ್ಲಿ ರಕ್ತ ಒಸರುವುದೂ ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಬಗ್ಗೆ ಪ್ರಸ್ತುತ ಶಾಲಾ ಪ್ರಾಂಶುಪಾಲರಿಂದ ವಿದ್ಯಾನಗರ ಪೊಲೀಸರು ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ ಘರ್ಷಣೆ ಬಗ್ಗೆ ಈ ತನಕ ಯಾರೂ ಲಿಖಿತ ದೂರು ನೀಡಿಲ್ಲ. ನೀಡಿದಲ್ಲಿ ಅದರ ಆಧಾರದಲ್ಲಿ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪರಸ್ಪರ ಹೊಡೆದಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಏಳು ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶಾಲಾ ಅಧಿಕೃತರು ತಿಳಿಸಿದ್ದಾರೆ. ಮಾತ್ರವಲ್ಲ ಈ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆಯನ್ನು ಶೀಘ್ರ ಕರೆದು ಈ ವಿಷಯದ ಬಗ್ಗೆ ಸಮಗ್ರ ಚರ್ಚೆ ನಡಸಿ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.